ಐಎಎಸ್ ಅಧಿಕಾರಿಗಳ ಮಕ್ಕಳು ಸರಕಾರಿ ಶಾಲೆಗೆ ಸೇರುವಂತೆ ಮಾಡಿ
ಶಿಫಾರಸು
ಹೊಸದಿಲ್ಲಿ, ಅ.28: ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದರೆ, ನಾಗರಿಕ ಸೇವಕರು ಹಾಗೂ ಇತರ ಅಧಿಕಾರಿಗಳು ತಮ್ಮ ಮಕ್ಕಳನ್ನು ತಮ್ಮ ಪ್ರದೇಶದ ಸರಕಾರಿ ಶಾಲೆಗೆ ಸೇರಿಸಬೇಕೆಂದು ಕೇಂದ್ರ ಪ್ರಾಯೋಜಿತ ಅಧ್ಯಯನವೊಂದು ಶಿಫಾರಸು ಮಾಡಿದೆ.
ಐಎಎಸ್ ಅಧಿಕಾರಿಗಳಿಂದ ತೊಡಗಿ ಪ್ಯೂನ್‌ಗಳ ವರೆಗೆ ಸರಕಾರಿ ನೌಕರರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಬೇಕು. ಇದರಿಂದ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗುತ್ತದೆಯೆಂದು ನೀತಿ ಆಯೋಗ ಪ್ರಾಯೋಜಿತ ಅಧ್ಯಯನವೊಂದು ತನ್ನ ವರದಿಯಲ್ಲಿ ತಿಳಿಸಿದೆ.
ಅಮೃತಸರದ ಗುರು ಅರ್ಜನ್‌ದೇವ್ ಅಭಿವೃದ್ಧಿ ಅಧ್ಯಯನ ಸಂಸ್ಥೆಯು ಈ ಅಧ್ಯಯನವನ್ನು ನಡೆಸಿದೆ. ಇದು ಗ್ರಾಮೀಣ ಪಂಜಾಬ್‌ನ ಪ್ರಾಥಮಿಕ ಶಿಕ್ಷಣದ ‘ರೋಗ ಚಿಹ್ನೆ ವಿಶ್ಲೇಷಣೆಯಾಗಿದ್ದರೂ’, ದೇಶಾದ್ಯಂತ ಸಾರ್ವಜನಿಕ ಸೇವಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಮಾಡಬೇಕೆಂದು ಅಧ್ಯಯನ ತಂಡ ಶಿಫಾರಸು ಮಾಡಿದೆ.
ದೇಶಾದ್ಯಂತ ವಿದ್ಯಾರ್ಥಿಗಳ ಕಲಿಯುವಿಕೆಯ ಫಲಿತಾಂಶ ಅತೃಪ್ತಿಕರ ಹಾಗೂ ನಿರೀಕ್ಷೆಗಿಂತ ಕೆಳಗೆಯೇ ಉಳಿದಿದೆಯೆಂದು ಅಧ್ಯಯನ ತಂಡವು ನೀತಿ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.
ಜಾಗತಿಕ ಪ್ರಾಥಮಿಕ ಶಿಕ್ಷಣದ ಗುರಿಯು ಜಾರುತ್ತಲೇ ಇದೆ ಹಾಗೂ ಗಗನ ಕುಸುಮವಾಗಿದೆ. ಶಿಕ್ಷಣ ಇಲಾಖೆಯು ಪ್ರಕ್ರಿಯೆಯನ್ನು ಪರಾಮರ್ಶಿಸಬೇಕು ಹಾಗೂ ಪಕಡ್ಬಂದಿ ಮಾದರಿಯೊಂದರೊಂದಿಗೆ ಮುಂದೆ ಬರಬೇಕೆಂದು ಅಧ್ಯಯನ ತಂಡದ ಪ್ರಧಾನ ಪರಿಶೋಧಕ ಗುರುಶರಣ್ ಸಿಂಗ್ ಕೈಂತ್ ವರದಿಯಲ್ಲಿ ಸಲಹೆ ನೀಡಿದ್ದಾರೆ.
ಉತ್ತರಪ್ರದೇಶದ ಎಲ್ಲ ಸರಕಾರಿ ನೌಕರರು ತಮ್ಮ ಮಕ್ಕಳನ್ನು ರಾಜ್ಯದ ಮೂಲ ಶಿಕ್ಷಣ ಮಂಡಳಿಯ ಪ್ರಾಥಮಿಕ ಶಾಲೆಗಳಿಗೆ ಕಳುಹಿಸುವಂತೆ ಖಚಿತಪಡಿಸಲು ನಿಯಮಾವಳಿ ರಚಿಸುವಂತೆ ಅಲಹಾಬಾದ್ ಹೈಕೋರ್ಟ್ ವರ್ಷದ ಹಿಂದೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.





