ಭಯೋತ್ಪಾದನೆ ಹೇಡಿಗಳ ಅಸ್ತ್ರ ಪಾಕ್‌ಗೆ ರಾಜನಾಥ್ ಸಿಂಗ್ ಕುಟುಕು
ಗ್ರೇಟರ್ ನೊಯ್ಡ,ಅ.28: ಇಂದಿಲ್ಲಿ ಪಾಕಿಸ್ತಾನವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ಅದು ಭಯೋತ್ಪಾದನೆಯ ಹೇಡಿತನದ ನೆರವು ಪಡೆದುಕೊಂಡು ಭಾರತದ ವಿರುದ್ಧ ಛಾಯಾ ಸಮರದಲ್ಲಿ ತೊಡಗಿದೆ ಮತ್ತು ದೇಶಕ್ಕೆ ಹಾನಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ನೆರೆಯ ದೇಶವು ಛಾಯಾ ಸಮರ ನಡೆಸುತ್ತಿದೆ. ಆದರೆ ಭಯೋತ್ಪಾದನೆ ಧೈರ್ಯಶಾಲಿಗಳ ಅಸ್ತ್ರವಲ್ಲ,ಅದು ಹೇಡಿಗಳ ಅಸ್ತ್ರವಾಗಿದೆ. ಹಿಂದಿನಿಂದ ಯುದ್ಧ ಮಾಡುವವರನ್ನು ಹೇಡಿಗಳೆನ್ನುತ್ತಾರೆ, ಅವರು ಭಯೋತ್ಪಾದನೆಯ ನೆರವು ಪಡೆಯುತ್ತಾರೆ ಎಂದು.
ಗಡಿ ಕಾವಲು ಪಡೆ ಐಟಿಬಿಪಿಯ ಶಿಬಿರದಲ್ಲಿ 55ನೇ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಐಟಿಬಿಪಿಯ ಕಟ್ಟುನಿಟ್ಟಿನ ನಿಗಾದಿಂದಾಗಿ ಈ ವರ್ಷ ಭಾರತೀಯ ಭೂಪ್ರದೇಶದಲ್ಲಿ ಚೀನಿ ಸೈನಿಕರಿಂದ ಅತಿಕ್ರಮಣಗಳು ಶೇ.60ರಷ್ಟು ಕಡಿಮೆಯಾಗಿವೆ ಎಂದರು.
ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಪ್ರಸ್ತಾಪಿಸಿದ ಅವರು,ನೆರೆಯ ರಾಷ್ಟ್ರವು ಭಯೋತ್ಪಾದನೆಗಿಳಿಯುವ ಮೂಲಕ ಭಾರತಕ್ಕೆ ಹಾನಿಯನ್ನುಂಟು ಮಾಡಲು,ಅದನ್ನು ಒಡೆಯಲು ಮತ್ತು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದರು.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲೊಂದಾಗಿರುವುದರಿಂದ ಅದರ ಪ್ರಗತಿಯನ್ನು ವಿಫಲಗೊಳಿಸಲು ದೇಶದ ಮೇಲೆ ಕೆಟ್ಟ ದೃಷ್ಟಿಯನ್ನಿಡಲಾಗಿದೆ ಎಂದು ಅವರು ಹೇಳಿದರು.





