ಸಿಂಧು ಸವಾಲು ಅಂತ್ಯ
ಫ್ರೆಂಚ್ ಓಪನ್ ಸೂಪರ್ ಸರಣಿ:

ಪ್ಯಾರಿಸ್, ಅ.28: ಭಾರತದ ಶಟ್ಲರ್ ಪಿ.ವಿ. ಸಿಂಧು ಫ್ರೆಂಚ್ ಓಪನ್ ಸೂಪರ್ ಸರಣಿಯ ಎರಡನೆ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಈ ವರ್ಷಾರಂಭದಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿ ಸಂಚಲನ ಮೂಡಿಸಿದ್ದ ಸಿಂಧು ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಚೀನಾದ ಬಿಂಗ್‌ಜಿಯಾವೊ ವಿರುದ್ಧ 22-20, 21-17 ನೇರ ಸೆಟ್‌ಗಳಿಂದ ಸೋತಿದ್ದಾರೆ.
10ನೆ ರ್ಯಾಂಕಿನ ಸಿಂಧು ಕೇವಲ 41 ನಿಮಿಷಗಳಲ್ಲಿ ದ್ವಿತೀಯ ಸುತ್ತಿನ ಪಂದ್ಯವನ್ನು ಸೋತಿದ್ದಾರೆ. ಸಿಂಧು ಮೊದಲ ಗೇಮ್‌ನಲ್ಲಿ ಚೀನಾದ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದ್ದರೂ 2 ಅಂಕಗಳ ಅಂತರದಿಂದ ಸೋತರು.
ಎರಡನೆ ಗೇಮ್‌ನಲ್ಲೂ ಸಿಂಧು ಚೀನಾದ ಆಟಗಾರ್ತಿಗೆ ತೀವ್ರ ಪೈಪೋಟಿಯನ್ನು ನೀಡಿದ್ದರು. ಆದರೆ, ಪಂದ್ಯ ಗೆದ್ದುಕೊಳ್ಳಲು ವಿಫಲರಾದರು.
21ರ ಪ್ರಾಯದ ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ ಬಳಿಕ ಬ್ಯಾಡ್ಮಿಂಟನ್ ಸೂಪರ್ ಸರಣಿಯಲ್ಲಿ ಎರಡನೆ ಬಾರಿ ಬೇಗನೆ ಹೊರ ನಡೆದಿದ್ದಾರೆ. ಕಳೆದ ವಾರ ಡೆನ್ಮಾರ್ಕ್ ಓಪನ್ ಸೂಪರ್ ಸರಣಿಯಲ್ಲಿ ಎರಡನೆ ಸುತ್ತಿನಲ್ಲಿ ಸಿಂಧು ಮುಗ್ಗರಿಸಿ ಭಾರೀ ನಿರಾಸೆಗೊಳಿಸಿದ್ದರು.





