ಗಡಿಯಲ್ಲಿನ ಗ್ರಾಮಗಳ ಮೇಲೆ ಹೆಚ್ಚುತ್ತಿರುವ ಪಾಕ್ ದಾಳಿ
ಅರ್ನಿಯಾ(ಜಮ್ಮು),ಅ.28: ಕದನ ವಿರಾಮವನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಪಾಕಿಸ್ತಾನಿ ಸೈನಿಕರು ವಿಶೇಷವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡು ಗಡಿ ಭಾಗದಲ್ಲಿರುವ ಗ್ರಾಮಗಳ ಮೇಲೆ ಭಾರೀ ಮಾರ್ಟರ್ ಶೆಲ್ ದಾಳಿಯನ್ನು ನಡೆಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಪಾಕಿಗಳ ದಾಳಿಯಲ್ಲಿ ಆರರ ಹರೆಯದ ಬಾಲಕ ಹಾಗೂ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 24 ಇತರ ನಾಗರಿಕರು ಗಾಯಗೊಂಡಿದ್ದಾರೆ. 60ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿದ್ದು, 200 ಜಾನುವಾರುಗಳು ಗಾಯಗೊಂಡಿವೆ. ಜಮ್ಮು ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿನ ಹಲವಾರು ಮನೆಗಳು ಮತ್ತು ಇತರ ಕಟ್ಟಡಗಳು ತೀವ್ರ ಹಾನಿಗೊಳಗಾಗಿವೆ.
ರಾತ್ರಿ ವೇಳೆ ಪರಿಸ್ಥಿತಿ ತೀರ ಬಿಗಡಾಯಿಸುತ್ತಿದೆ. ಗುಂಡಿನ ದಾಳಿಯಿಂದ ಪಾರಾಗಲು ಸುರಕ್ಷಿತ ತಾಣವನ್ನು ಕಂಡುಕೊಳ್ಳುವುದೇ ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯಾಗಿದೆ.
ಪಾಕ್ ಸೈನಿಕರು ನಾಗರಿಕರ ಮೇಲೆ ದಾಳಿಗಳನ್ನು ನಡೆಸುವುದು ಹೆಚ್ಚುತ್ತಿದೆ. ನಾವು ಅವರಿಗೆ ಸುಲಭದ ಗುರಿಗಳಾಗಿದ್ದೇವೆ. ಬಿಎಸ್‌ಎಫ್ ಯೋಧರ ವಿರುದ್ಧ ಕಾದಾಡುವಲ್ಲಿ ವಿಫಲರಾಗಿರುವ ಅವರು ನಾಗರಿಕರನ್ನು ಮತ್ತು ಅವರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಸುಚೇತಗಡ ಗ್ರಾಮದ ನಿವಾಸಿ ಸುಭಾಶ್ಚಂದ್ರ ಹೇಳಿದರು. ಅಂತಾರಾಷ್ಟ್ರೀಯ ಗಡಿಗೆ ಸಮೀಪವಿರುವ ಅವರ ಮನೆಯ ಆವರಣದಲ್ಲಿ ಪಾಕಿಗಳು ಹಾರಿಸಿದ್ದ ಶೆಲ್‌ಗಳು ಸ್ಫೋಟಗೊಂಡು ಕುಟುಂಬದ ಏಳು ಸದಸ್ಯರು ಗಾಯಗೊಂಡಿದ್ದಾರೆ.
ಅ.21ರಂದು ಪಾಕ್ ದಾಳಿಗೆ ಉತ್ತರಿಸಿದ ಬಿಎಸ್‌ಎಫ್ ಪ್ರತಿದಾಳಿ ನಡೆಸಿ 7 ಪಾಕ್ ರೇಂಜರ್‌ಗಳು, ಓರ್ವ ಭಯೋತ್ಪಾದಕನನ್ನು ಬಲಿ ಪಡೆ ದಾಗಿನಿಂದ ಗಡಿಯಾಚೆಯಿಂದ ಗುಂಡಿನ ದಾಳಿಗಳು ತೀವ್ರಗೊಂಡಿವೆ. ಹಲವಾರು ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ರಾಜ್ಯ ಸರಕಾರವು ಸ್ಥಾಪಿಸಿರುವ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.





