ರಾಕಿ ಯಾದವ್ ಜಾಮೀನಿಗೆ ತಡೆ
ಆದಿತ್ಯ ಸಚ್‌ದೇವ್ ಕೊಲೆ ಪ್ರಕರಣ
ಹೊಸದಿಲ್ಲಿ, ಅ.28: ಬಿಹಾರದಲ್ಲಿ ತನ್ನ ಎಸ್‌ಯುವಿ ವಾಹನವನ್ನು ಹಿಂದೆ ಹಾಕಿದುದಕ್ಕಾಗಿ 12ನೆ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಗುಂಡು ಹಾರಿಸಿ ಕೊಂದಿದ್ದ ರಾಕೇಶ್ ರಂಜನ್ ಅಲಿಯಾಸ್ ರಾಕಿ ಯಾದವ್‌ಗೆ ಪಾಟ್ನಾ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನಿಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಆರೋಪಿ ಮರಳಿ ಕಾರಾಗೃಹ ಸೇರಬೇಕಾಗಿದೆ.
ಪಾಟ್ನಾ ಹೈಕೋರ್ಟ್ ಅ.19ರಂದು ಮಂಜೂರು ಮಾಡಿದ್ದ ಜಾಮೀನನ್ನು ಪ್ರಶ್ನಿಸಿ ಬಿಹಾರ ಸರಕಾರ ಸಲ್ಲಿಸಿರುವ ಮೇಲ್ಮನವಿಯ ಕುರಿತು, ಅಮಾನತುಗೊಂಡಿರುವ ಜೆಡಿಯು ವಿಧಾನಪರಿಷತ್ ಸದಸ್ಯನೊಬ್ಬನ ಪುತ್ರ ರಾಕಿಯ ಪ್ರತಿಕ್ರಿಯೆಯೊಂದನ್ನು ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ಕೇಳಿವೆ.
ಇದೊಂದು ‘ಬಹಿರಂಗ ಗುಟ್ಟಿನ’ ಪ್ರಕರಣವಾಗಿದೆ. ರಾಕಿ ಪಾನಮತ್ತ ಸ್ಥಿತಿಯಲ್ಲಿದ್ದನು. ಆದುದರಿಂದ ಆತನ ಜಾಮೀನನ್ನು ತಕ್ಷಣವೇ ರದ್ದುಪಡಿಸಬೇಕು ಅಥವಾ ಪಾಟ್ನಾ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಬೇಕೆಂದು ಬಿಹಾರ ಸರಕಾರದ ಪರ ಹಿರಿಯ ವಕೀಲ ರಾಜೀವ್ ದತ್ತಾ ವಾದಿಸಿದರು.
ಪ್ರಕರಣದ ಕುರಿತು ಆರೋಪ ಪಟ್ಟಿ ದಾಖಲಿಸಲಾಗಿದೆ. ಅದು ಅವರ ವಿರುದ್ಧ ಹೋಗಬಹುದೆಂದು ದತ್ತಾರನ್ನು ಎಚ್ಚರಿಸಿದ ನ್ಯಾಯಪೀಠ, ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ದೀಪಾವಳಿಯ ಬಳಿಕಕ್ಕೆ ಮುಂದೂಡಿತು.





