ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ಸರಕಾರ ದ್ವಂದ್ವ ನೀತಿ ಬಿಡಲಿ
ಒಂದು ಕಾಲದಲ್ಲಿ ಸೇವೆಯಾಗಿದ್ದ ವೈದ್ಯಕೀಯ ವೃತ್ತಿ ಈಗ ವ್ಯಾಪಾರವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೇಗೆ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಸುಲಿಗೆ ಮಾಡಲಾಗುತ್ತದೋ ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬರುವ ಅಮಾಯಕ ರೋಗಿಗಳು ಮತ್ತು ಅವರ ಸಂಬಂಧಿಕರ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಬ್ಬ ವ್ಯಕ್ತಿಯ ಚಿಕಿತ್ಸೆಗಾಗಿ 42 ಲಕ್ಷ ರೂ.ವಸೂಲಿ ಮಾಡಿದ ಸಂಗತಿ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಮನೆಯನ್ನು ಮಾರಿ ಆಸ್ಪತ್ರೆಯ ಬಾಕಿ ಪಾವತಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು ಹಾಗೂ ಚಿಕಿತ್ಸೆಯ ವೇಳೆ ನಿರ್ಲಕ್ಷ ತೋರುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರಗಿಸಲು ಹೊಸ ಕಾಯ್ದೆ ರಚಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ನೀಡಿದ ಹೇಳಿಕೆ ಸ್ವಾಗತಾರ್ಹವಾಗಿದೆ. ಖಾಸಗಿ ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿಕ್ರಂಜೀತ್ ಸೇನ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ ಸಮಿತಿಯನ್ನು ರಚಿಸಲಾಗಿದೆ. ತಜ್ಞರ ವರದಿಯನ್ನು ಆಧರಿಸಿ ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಗುವುದೆಂದು ಸಚಿವರು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಎದುರಿಸುವ ಸಮಸ್ಯೆ ಹಾಗೂ ಅಹವಾಲುಗಳನ್ನು ಪರಿಶೀಲಿಸಲು ಶಾಸನಬದ್ಧ ಸಮಿತಿಯನ್ನು ರಚಿಸಲಾಗುವುದು ಎಂದು ರಮೇಶ್ ಕುಮಾರ್ ಅವರು ಹೇಳಿದ್ದಾರೆ. ರೋಗಿಗಳ ಅಸಹಾಯಕತೆಯನ್ನು ಖಾಸಗಿ ಆಸ್ಪತ್ರೆಗಳು ದುರುಪಯೋಗ ಮಾಡಿಕೊಳ್ಳುತ್ತಿವೆ, ಈ ಬಗ್ಗೆ ತಮಗೆ ದೂರುಗಳು ಬಂದಿವೆ ಎಂದು ಅವರು ಹೇಳಿದ್ದಾರೆ. ಆದರೆ ಒಂದು ಕಡೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣದ ಮಾತನಾಡುತ್ತಲೇ ಇನ್ನೊಂದು ಕಡೆ ಬಡವರ ಪಾಲಿನ ಆಶಾಕಿರಣವಾಗಿರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಕಬಂಧಬಾಹುಗಳಿಗೆ ಒಪ್ಪಿಸಿಬಿಡುವ ಜನವಿರೋಧಿ ಕೆಲಸವನ್ನೂ ಇದೇ ಸರಕಾರ ಮಾಡುತ್ತಿದೆ. ಉಡುಪಿ ಜಿಲ್ಲೆ ಮಾತ್ರವಲ್ಲ ಸುತ್ತಮುತ್ತಲ ಜಿಲ್ಲೆಗಳ ಪಾಲಿನ ಬಡವರ ಪಾಲಿಗೆ ಸಂಜೀವಿನಿಯಾಗಿರುವ ಉಡುಪಿ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಹಾಜಿ ಅಬ್ದುಲ್ಲಾ ಶುಶ್ರೂಶಾಲಯ)ವನ್ನು ಮೇಲ್ದರ್ಜೆಗೇರಿಸುವ ಹೆಸರಿನಲ್ಲಿ ಸರಕಾರ ಖಾಸಗಿ ಸಂಸ್ಥೆಯೊಂದಕ್ಕೆ ಒಪ್ಪಿಸುತ್ತಿದೆ. ಇದಕ್ಕಿರುವ ವ್ಯಾಪಕ ಜನವಿರೋಧವನ್ನೂ ಸರಕಾರ, ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು ಆಘಾತಕಾರಿಯಾಗಿದೆ. ಜನಪರ, ಬಡವರ ಪರ, ಶೋಷಿತರ ಪರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯ ಸರಕಾರ ಇಂತಹ ಬಡವರ ವಿರೋಧಿ ಕೆಲಸಕ್ಕೆ ಒಪ್ಪಿಗೆ ನೀಡಿರುವುದು ಅತ್ಯಂತ ಖಂಡನೀಯ. ಸರಕಾರ ಇದನ್ನು ರದ್ದು ಪಡಿಸಲೇ ಬೇಕು. ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಮುನ್ನ ಸರಕಾರಿ ಆಸ್ಪತ್ರೆಗಳ ಬಗ್ಗೆ ಸಚಿವರು ಗಮನ ನೀಡಬೇಕಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ ಅಂತಲೇ ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಅನೇಕ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಇರುವ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಕರ್ಯ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯರೇ ಇರುವುದಿಲ್ಲ. ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೆಲಸವನ್ನು ದಾದಿಯರೇ ನಿರ್ವಹಿಸುತ್ತಾರೆ. ಹೀಗಾಗಿ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಈ ಆಸ್ಪತ್ರೆಗಳು ವ್ಯಾಪಾರಿ ಕೇಂದ್ರಗಳಂತಾಗಿವೆ. ರೋಗಿಗಳು ಬಂದರೆ ಸಾಕು ಅವರು ಜೇಡರ ಬಲೆಯಲ್ಲಿ ಸಿಕ್ಕ ನೊಣದಂತೆ ಈ ಆಸ್ಪತ್ರೆಗಳಲ್ಲಿ ಒದ್ದಾಡಬೇಕಾಗುತ್ತದೆ. ರೋಗಿಗೆ ಏನು ಕಾಯಿಲೆ ಆಗಿದೆ ಎಂಬುದನ್ನು ಸಮಾಧಾನವಾಗಿ ನೋಡದೆ ಅನಗತ್ಯ ನಾನಾ ಪರೀಕ್ಷೆಗಳಿಗೆ ಬರೆದುಕೊಡುತ್ತಾರೆ. ವೈದ್ಯರು ಬರೆದ ಚೀಟಿಯನ್ನು ತೆಗೆದುಕೊಂಡು ರೋಗಿಗಳು ಖಾಸಗಿ ಪ್ರಯೋಗಾಲಯಕ್ಕೆ ಹೋಗಿ ದುಬಾರಿ ವೆಚ್ಚದ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಈ ಪ್ರಯೋಗಾಲಯದ ವರದಿ ಬಂದ ನಂತರ ಅದನ್ನು ಕಾಟಾಚಾರಕ್ಕೆ ನೋಡುವ ವೈದ್ಯರು ದುಬಾರಿ ಮೊತ್ತದ ಔಷಧಗಳನ್ನು ಬರೆದುಕೊಡುತ್ತಾರೆ. ಕೆಲಬಾರಿ ಅನಗತ್ಯವಾಗಿ ತಮ್ಮ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಂಡು ಬಿಲ್ಲು ಹೆಚ್ಚಾಗುವಂತೆ ಮಾಡುತ್ತಾರೆ. ಇಲ್ಲಿ ಪ್ರಯೋಗಾಲಯಗಳು, ಔಷಧ ಕಂಪೆನಿಗಳು, ಔಷಧ ಅಂಗಡಿಗಳು ಹಾಗೂ ವೈದರು ಪರಸ್ಪರ ಶಾಮೀಲಾಗಿ ರೋಗಿಗಳ ಜೇಬಿಗೆ ಕತ್ತರಿ ಹಾಕುತ್ತಾರೆ. ಇನ್ನು ಕೆಲ ವೈದ್ಯರು ಸ್ವಂತದ ನರ್ಸಿಂಗ್ ಹೋಂ ಹೊಂದಿರುತ್ತಾರೆ. ನರ್ಸಿಂಗ್ ಹೋಂನಲ್ಲಿ ಪ್ರಯೋಗಾಲಯ ಹಾಗೂ ಔಷಧ ಅಂಗಡಿಗಳನ್ನು ಇಟ್ಟುಕೊಂಡಿರುತ್ತಾರೆ. ಇಂತಹ ವೈದ್ಯರ ಬಳಿ ರೋಗಿ ಚಿಕಿತ್ಸೆ ಪಡೆದರೆ ರೋಗಿಯ ಕತೆ ಮುಗಿದೇ ಹೋಗುತ್ತದೆ. ಆಸ್ಪತ್ರೆಗಳು ನಿಗದಿ ಪಡಿಸುವ ದುಬಾರಿ ಬಿಲ್ಲುಗಳನ್ನು ಕಟ್ಟಲು ಮನೆಮಾರುಗಳನ್ನು ಮಾರಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲ ಮಾಡಿದರೂ ಬದುಕಿ ಬರುವ ಗ್ಯಾರಂಟಿ ಇರುವುದಿಲ್ಲ. ಎಲ್ಲ ಖಾಸಗಿ ಆಸ್ಪತ್ರೆಗಳು ಹೀಗೇ ಇವೆ ಎಂದಲ್ಲ. ಕೆಲ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಯೂ ದೊರಕುತ್ತದೆ. ಆದರೆ, ದುಬಾರಿ ಶುಲ್ಕದ ವಿಷಯಕ್ಕೆ ಬಂದರೆ ಎಲ್ಲ ಆಸ್ಪತ್ರೆಗಳೂ ಒಂದೇತೆರನಾಗಿವೆ. ಸಚಿವರು ಹೇಳಿದಂತೆ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವುದು ಸುಲಭದ ಸಂಗತಿಯಲ್ಲ. ಎಡಪಂಥೀಯ ಹಿನ್ನೆಲೆಯ ರಮೇಶ್ ಕುಮಾರ್ ಅವರಿಗೆ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಉತ್ಸಾಹ ಬಂದಿದೆ. ಆದರೆ, ಈ ಖಾಸಗಿ ಆಸ್ಪತ್ರೆಗಳ ಲಾಬಿ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ವಿಧಾನಸೌಧದಲ್ಲಿನ ಕುರ್ಚಿಗಳನ್ನೇ ಅಲುಗಾಡಿಸುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಖಾಸಗಿ ಆಸ್ಪತ್ರೆಗಳೆಂದರೆ ಸಣ್ಣ ಪುಟ್ಟ ನರ್ಸಿಂಗ್ ಹೋಂಗಳು ಮಾತ್ರವಲ್ಲ. ಅವುಗಳಿಗಿಂತ ಮಿಗಿಲಾಗಿ ಖಾಸಗಿ ಮೆಡಿಕಲ್ ಕಾಲೇಜುಗಳು ನಡೆಸುವ ಆಸ್ಪತ್ರೆಗಳಲ್ಲಿ ಪ್ರತಿಯೊಂದು ಚಿಕಿತ್ಸೆಗೂ ದುಬಾರಿ ಶುಲ್ಕ ನಿಗದಿಪಡಿಸಲಾಗುತ್ತದೆ. ಮೆಡಿಕಲ್ ಕಾಲೇಜುಗಳನ್ನು ನಡೆಸುವವರು ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳಾಗಿದ್ದಾರೆ. ನಮ್ಮ ವಿಧಾನಸಭೆಯ ಆಳುವ ಹಾಗೂ ಪ್ರತಿಪಕ್ಷ ಸ್ಥಾನದಲ್ಲಿ ಮೆಡಿಕಲ್ ಕಾಲೇಜು ಧಣಿಗಳು ಮುಂಚೂಣಿಯಲ್ಲಿದ್ದಾರೆ. ರಮೇಶ್ ಕುಮಾರ್ ಅವರ ಅನೇಕ ಸಂಪುಟ ಸಹೋದ್ಯೋಗಿಗಳು ತಮ್ಮದೇ ಆದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಾರೆ. ಇಂತಹವರಿಗೆ ಕಡಿವಾಣ ಹಾಕುವುದು ಸುಲಭದ ಸಂಗತಿಯಲ್ಲ. ತಜ್ಞರ ವರದಿ ಜಾರಿಯಾದರೂ ಅದನ್ನು ಆಧರಿಸಿ ಕಾನೂನು ರಚಿಸಲು ನಾನಾ ವಿಘ್ನಗಳು ಎದುರಾಗುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಮೇಶ್ ಕುಮಾರ್ ಅವರಂತೆ ಜನಪರ ಚಳವಳಿಯ ಹಿನ್ನೆಲೆಯಿಂದ ಬಂದಿರುವುದರಿಂದ ಇಂತಹ ಶಾಸನ ತರಲು ಅವರು ಮನಸ್ಸು ಮಾಡಬಹುದಾದರೂ, ಅನೇಕ ಬಾರಿ ತೀವ್ರ ಒತ್ತಡಗಳ ಎದುರು ಅಸಹಾಯಕರಾಗಬೇಕಾಗಬಹುದು. ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಮುನ್ನ ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ಸಚಿವರು ಕ್ರಮ ಕೈಗೊಳ್ಳಬೇಕಾಗಿದೆ. ಸರಕಾರ ಮನಸ್ಸು ಮಾಡಿದರೆ ಇದು ಅಸಾಧ್ಯವಲ್ಲ. ಸರಕಾರಿ ಆಸ್ಪತ್ರೆಗಳು ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಬೆಂಗಳೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಗಳು ಅತ್ಯಂತ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ಇವುಗಳ ಮುಖ್ಯಸ್ಥರೂ ಕಾರಣವಾಗಿರಬಹುದು. ಆದರೆ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕುಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಸೌಕರ್ಯವಿಲ್ಲ. ಈ ಆಸ್ಪತ್ರೆಗಳಿಗೆ ಕಾಯಕಲ್ಪ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಅನೇಕ ಸರಕಾರಿ ಆಸ್ಪತ್ರೆಗಳು ಅವ್ಯವಹಾರದ ತಾಣವಾಗಿವೆೆ. ಈ ಆಸ್ಪತ್ರೆಗಳಲ್ಲಿ ಅವಧಿ ಮೀರಿದ ಔಷಧಿಗಳನ್ನು ಪೂರೈಸಲಾಗುತ್ತಿದೆ ಹಾಗೂ 10 ಕೋಟಿ ರೂ. ವೌಲ್ಯದ ಅವಧಿ ಮೀರಿದ ಔಷಧಗಳಿವೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಇನ್ನು ಕೆಲ ಆಸ್ಪತ್ರೆಗಳಲ್ಲಿ ವೈದ್ಯರಿದ್ದರೂ, ಅವರು ಕೆಲ ಹೊತ್ತು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ದಿನದ ಬಹುತೇಕ ಸಮಯವನ್ನು ಹೆಚ್ಚುವರಿ ಆದಾಯಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ವಿನಿಯೋಗಿಸುತ್ತಾರೆ. ಇದಕ್ಕೂ ಕಡಿವಾಣ ಹಾಕಬೇಕಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಪ್ರಸವಕ್ಕೆಂದು ಬರುವ ಅನೇಕ ಹೆಣ್ಣುಮಕ್ಕಳು ಸಾವಿಗೀಡಾದ ವರದಿಗಳು ಬರುತ್ತಿವೆ. 2015ರಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಸವಕ್ಕೆಂದು ಬಂದ 635 ತಾಯಂದಿರು ತಮ್ಮ ಎಳೆ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಜೊತೆಗೆ ಸರಕಾರಿ ಆಸ್ಪತ್ರೆಗಳನ್ನು ಸುಧಾರಿಸುವುದಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.
ಸಚಿವ ರಮೇಶ್ ಕುಮಾರ್ ಅವರಿಗೆ ರೋಗಿಗಳ ಬಗ್ಗೆ ಕಾಳಜಿ ಇದೆ. ಆದರೆ ಜಾಗತೀಕರಣದ ನಂತರ ನಮ್ಮ ಸರಕಾರಗಳ ನೀತಿ ಖಾಸಗೀಕರಣದ ಪರವಾಗಿದೆ. ಅಂತಲೇ ಉಡುಪಿ ಮತ್ತು ಬೆಳಗಾವಿಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ವಹಿಸಿ ಕೊಡಲು ಸರಕಾರ ಮುಂದಾಗಿದೆ. ಆದ್ದರಿಂದ ಸಚಿವರು ಇಂತಹ ಖಾಸಗೀಕರಣ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಬೇಕಾಗಿದೆ.





