ಯುನಿವೆಫ್‌ನಿಂದ ‘ಸರ್ವ ಧರ್ಮಿಯರೊಂದಿಗೆ ಸ್ನೇಹ ಸಂವಾದ’ ಕಾರ್ಯಕ್ರಮ

ಮಂಗಳೂರು, ಅ.28: ಯುನಿವೆಫ್ ಕರ್ನಾಟಕದ ದಶಮಾನೋತ್ಸವದ ಪ್ರಯುಕ್ತ ಸರ್ವ ಧರ್ಮಿಯರೊಂದಿಗೆ ಸ್ನೇಹ ಸಂವಾದ ಕಾರ್ಯಕ್ರಮವು ಇಂದು ನಗರದ ಬಲ್ಮಠದ ಶಾಂತಿ ನಿಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಗೆ ನನ್ನ ಧರ್ಮ ಮಾರಕವೇ? ಎಂಬ ವಿಷಯದಲ್ಲಿ ಮಾತನಾಡಿದ ಯುನಿವೆಫ್ ಕರ್ನಾಟಕದ ಕಾರ್ಯದರ್ಶಿ ಯು.ಕೆ.ಖಾಲಿದ್, ಪ್ರಸಕ್ತ ದೇಶಾದ್ಯಂತ ಹಿಂಸೆ, ಅಪನಂಬಿಕೆ, ಅಸಹಿಷ್ಣುತೆ ಜಾಸ್ತಿಯಾಗಿದೆ, ಜಾತಿ, ವರ್ಣ ಸಂಘರ್ಷಗಳು, ಕೋಮುಗಲಭೆಗಳು ನಡೆಯುತ್ತಲೆ ಇದೆ. ಧಾರ್ಮಿಕ ಆಚರಣೆಗಳು ರಾಜಕೀಯ ಸ್ಪರ್ಶ ಪಡೆದುಕೊಂಡಿದೆ. ಅಧರ್ಮದ ಕೆಲಸ ಮಾಡುವವರು ಧರ್ಮದ ಮುಖವಾಡ ಹಾಕಿಕೊಳ್ಳುತ್ತಿದ್ದಾರೆ. ಧರ್ಮದ ಬಗ್ಗೆ ಅರಿವು ಇಲ್ಲದವರು ಇಸ್ಲಾಂ ಧರ್ಮದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಗಣನಾಥ ಶೆಟ್ಟಿ ಎಕ್ಕಾರು, ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಬಲ್ಮಠದ ನಿವೃತ್ತ ಪ್ರಾಂಶುಪಾಲ ಪಿ.ಪಿ.ಜೋಸೆಫ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಸಂವಾದವನ್ನು ನಡೆಸಲಾಯಿತು.





