ಬಯಲಾದ ಗೀಲಾನಿ ದ್ವಂದ್ವ ನೀತಿ
ಜಮ್ಮು, ಅ.28: ಕಾಶ್ಮೀರದಲ್ಲಿನ ಪರಿಸ್ಥಿತಿಯಿಂದಾಗಿ ಅಲ್ಲಿನ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲಾಗದೆ ಹಾಗೂ ಯುವಕರು ಉದ್ಯೋಗ ಸಿಗದೆ ತೊಂದರೆಗೀಡಾಗಿದ್ದರೂ ಅಲ್ಲಿನ ಪ್ರತ್ಯೇಕತಾವಾದಿ ನಾಯಕರುಗಳು ಮಾತ್ರ ತಮ್ಮ ಮಕ್ಕಳನ್ನು ವಿದೇಶಗಳಿಗೆ ಶಿಕ್ಷಣ ಹಾಗೂ ಉದ್ಯೋಗಗಳಿಗೆ ಕಳುಹಿಸಿ ಆರಾಮವಾಗಿದ್ದಾರೆಂಬ ದೂರುಗಳು ಆಗಾಗ ಕೇಳಿ ಬರುತ್ತವೆ. ಇಂತಹುದೇ ಇನ್ನೊಂದು ದ್ವಂದ್ವ ನೀತಿಯ ದೃಷ್ಟಾಂತದಲ್ಲಿ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿ ಹತ್ಯೆಯ ನಂತರ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಕಾಶ್ಮೀರದ ಎಲ್ಲ ಶಾಲೆಗಳನ್ನು ಬಲವಂತವಾಗಿ ಮುಚ್ಚಿಸಿ ಕಡ್ಡಾಯವಾಗಿ ರಜೆ ನೀಡಿದ್ದರೆ, ಒಂದು ಶಾಲೆ ಮಾತ್ರ ಇದರಿಂದ ಹೊರತಾಗಿತ್ತು. ಈ ಶಾಲೆಯೇ ಶ್ರೀನಗರದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್. ಈ ಶಾಲೆಯ ಒಂಬತ್ತನೇ ಹಾಗೂ ಹತ್ತನೇ ತರಗತಿಯ 573 ಮಕ್ಕಳು ಇತ್ತೀಚೆಗೆ ಇಂಟರ್ನಲ್ ಪರೀಕ್ಷೆಗೆ ಹಾಜರಾಗಿದ್ದರು. ಈ ವಿದ್ಯಾರ್ಥಿಗಳಲ್ಲಿ ಹುರಿಯತ್ ಅಧ್ಯಕ್ಷ ಸಯ್ಯದ್ ಅಲಿ ಶಾ ಗೀಲಾನಿಯವರ ಮೊಮ್ಮಗಳೂ ಸೇರಿದ್ದಳು. ಈಕೆ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಗೀಲಾನಿಯವರ ಹಿರಿಯ ಪುತ್ರ ಡಾ ನಯೀಮ್ ಝಫರ್ ಗೀಲಾನಿಯವರ ಪುತ್ರಿ.
ನಯೀಮ್ ಹುರಿಯತ್ ಕಾನ್ಫರೆನ್ಸ್ ಸದಸ್ಯರಲ್ಲವಾಗಿದ್ದು ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ಶ್ರೀನಗರದಲ್ಲಿ ವಾಸವಾಗಿದ್ದಾರೆ. ಶಾಲೆ ಪರೀಕ್ಷೆ ನಡೆಸುವುದಾಗಿ ಹೇಳಿದಾಗ ನನ್ನ ಪುತ್ರಿ ಕಡ್ಡಾಯವಾಗಿ ಅದಕ್ಕೆ ಹಾಜರಾಗಲೇ ಬೇಕಾಗಿತ್ತು. ಇಲ್ಲದೇ ಹೋದಲ್ಲಿ ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯುವ ಅಂತಿಮ ಪರೀಕ್ಷೆಗೆ ಆಕೆಗೆ ಹಾಜರಾಗುವುದು ಸಾಧ್ಯವಾಗುತ್ತಿರಲಿಲ್ಲ, ಎಂದು ನಯೀಮ್ ಹೇಳುತ್ತಾರೆ. ವರದಿಯೊಂದರ ಪ್ರಕಾರ ಪರೀಕ್ಷೆ ಅಕ್ಟೋಬರ್ 1 ರಿಂದ 5 ತಾರೀಕಿನ ತನಕ ನಗರದ ಸ್ಟೇಡಿಯಂ ಒಂದರಲ್ಲಿ ಅತ್ಯಧಿಕ ಭದ್ರತೆಯ ನಡುವೆ, ಜಮ್ಮು ಕಾಶ್ಮೀರ ಸರಕಾರದ ಸಹಕಾರದೊಂದಿಗೆ ನಡೆದಿತ್ತು.







