ಮುಲ್ಲರಪಟ್ಣ: ಶರೀಫ್ ಮನೆಗೆ ಸಚಿವ ರೈ ಭೇಟಿ

ಬಂಟ್ವಾಳ, ಅ.28: ಮುಲ್ಲರಪಟ್ಣ ಮಾರ್ಗದಂಗಡಿ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಶರೀಫ್‌ರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು. ಶರೀಫ್ ಸಹೋದರ ಹಾಗೂ ಕುಟುಂಬಸ್ಥರೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರೈ, ಮಾರ್ಗದಂಗಡಿಯಲ್ಲಿ ಬುಧವಾರ ನಡೆದ ಆಕಸ್ಮಿಕ ಘಟನೆಯಿಂದ ತನಗೆ ತೀವ್ರ ನೋವುಂಟುಮಾಡಿದೆ.
ಘಟನೆ ಸಂಭವಿಸಿದ ದಿನ ಬೆಂಗಳೂರಿನ ಲ್ಲಿದ್ದೆ. ಇಲ್ಲಿದ್ದ ಪಕ್ಷದ ಮುಖಂಡರಿಂದ ಮಾಹಿತಿ ಲಭಿಸಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂೂಷಣ್ ಜಿ. ಬೊರಸೆ, ಜಿಲ್ಲಾಧಿಕಾರಿ ಜಗದೀಶ್‌ರಿಗೆ ಕರೆ ಮಾಡಿ ಪ್ರಕರಣವನ್ನು ನಿರ್ಲಕ್ಷಿಸದೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಸೂಚಿಸಿದ್ದೆ ಎಂದು ಹೇಳಿದರು. ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದು, ಮೃತ ಶರೀಫ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಪ್ರಯತ್ನ ನಡೆಸಲಾಗುವುದು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ತನಿಖೆ ನಡೆಸುವಂತೆ ಮತ್ತೊಮ್ಮೆ ಎಸ್ಪಿಹಾಗೂ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ರೈ ಹೇಳಿದರು.
ಈ ಸಂದರ್ಭ ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಮತ್ತಿತರರು ಉಪಸ್ಥಿತರಿದ್ದರು.







