ಟಿಪ್ಪು ಜನ್ಮದಿನಾಚರಣೆ: ಸರಕಾರಿ ಆದೇಶದ ವಿರುದ್ಧ ನಿರ್ಣಯಕ್ಕೆ ಪಟ್ಟು
ಸುಳ್ಯ ತಾಪಂ ಸಾಮಾನ್ಯ ಸಭೆ
ಸುಳ್ಯ, ಅ.28: ಟಿಪ್ಪು ಜನ್ಮದಿನ ಆಚರಿಸಲು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದರೂ ಕೂಡ ಶುಕ್ರವಾರ ನಡೆದ ಸುಳ್ಯ ತಾಪಂ ಸಾಮಾನ್ಯ ಸಭೆಯಲ್ಲಿ ಸರಕಾರಿ ಆದೇಶಕ್ಕೆ ವಿರುದ್ಧವಾಗಿ ನಿರ್ಣಯಗೊಳ್ಳಲು ಪಟ್ಟು ಹಿಡಿದ ವಿದ್ಯಮಾನ ನಡೆಯಿತು.
ಟಿಪ್ಪುಜನ್ಮ ದಿನಾಚರಣೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಉದಯ ಕೊಪ್ಪಡ್ಕ ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ಅಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್, ತೀರ್ಥರಾಮ ಜಾಲ್ಸೂರು ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೆ, ಸರಕಾರದ ಸುತ್ತೋಲೆಯನ್ನು ಅಧೀನ ಸಂಸ್ಥೆಗಳು ಪಾಲಿಸಬೇಕು ಎಂದು ಒತ್ತಾಯಿಸಿದರು.
ಶಾಂತಿಭಂಗಕ್ಕೆ ಕಾರಣವಾಗಬಹುದು ಎಂಬ ದೃಷ್ಟಿಯಿಂದ ಆಚರಣೆಯ ವಿರುದ್ಧ ನಿರ್ಣಯ ಕೈಗೊಳ್ಳಬಹುದು ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು. ಈ ಹೇಳಿಕೆಗೆ ಪುಷ್ಪಾವತಿ ಬಾಳಿಲ, ಪುಷ್ಪಾಮೇದಪ್ಪ, ಹರೀಶ್ ಕಂಜಿಪಿಲಿ ಬೆಂಬಲ ಸೂಚಿಸಿದರು. ಈ ಮಧ್ಯೆ ಮಧ್ಯಪ್ರವೇಶಿಸಿದ ತಾಪಂ ಇಒ ಮಧುಕುಮಾರ್, ಸರಕಾರದ ಆದೇಶವನ್ನು ಪಾಲಿಸಬೇಕಾಗುತ್ತದೆ. ಅದಕ್ಕೆ ವಿರುದ್ಧವಾಗಿ ನಿರ್ಣಯಗೊಳ್ಳಲು ಸಾಧ್ಯವಿಲ್ಲ ಎಂದರು.
ಅಧಿಕಾರಿಗಳು ಗೈರು: ಸಭೆಯಲ್ಲಿ ಹಲವು ಅಧಿಕಾರಿಗಳು ಗೈರು ಹಾಜರಾಗಿರುವುದು ಸದಸ್ಯರು ಹಾಗೂ ಇಒ ಅವರನ್ನು ಕೆರಳಿಸಿತು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಇಲಾಖಾಧಿಕಾರಿಗಳು ಇಲ್ಲದಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶುಭದಾ ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಹಶೀಲ್ದಾರ್ ಎಂ.ಎಂ.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.







