ಹೊಸದಿಲ್ಲಿಗೆ ತೆರಳಿದ ಬಿಎಸ್‌ವೈ
ಕೆಂಗಲ್ ಹನುಮಂತಯ್ಯ ಆಸ್ಪತ್ರೆ ಉದ್ಘಾಟನೆ
ಬೆಂಗಳೂರು, ಅ.28: ಗಣಿ ಕಂಪೆನಿಗಳಿಂದ ಪ್ರೇರಣಾ ಶಿಕ್ಷಣ ಸಂಸ್ಥೆಗೆ ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಆರೋಪದಿಂದ ಮುಕ್ತವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸದಿಲ್ಲಿಗೆ ತೆರಳಿದ್ದಾರೆ.
ಇದೇ ಪ್ರಕರಣಗಳಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಲ್ಲದೆ, ಕೆಲ ದಿನಗಳ ಕಾಲ ಜೈಲು ವಾಸವನ್ನು ಅನುಭವಿಸಬೇಕಾಗಿತ್ತು. ಆದರೆ, ಇದೀಗ ತಮ್ಮ ವಿರುದ್ಧದ ಆರೋಪಗಳಿಂದ ಮುಕ್ತವಾಗಿರುವ ಯಡಿಯೂರಪ್ಪ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಾಹಿತಿ ನೀಡಲು ಹೊಸದಿಲ್ಲಿಗೆ ತೆರಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಪದಾಧಿಕಾರಿಗಳ ನೇಮಕ ಕುರಿತು ಉಂಟಾಗಿರುವ ಅಸಮಾಧಾನವನ್ನು ಸರಿಪಡಿಸಿ, ಪಕ್ಷವನ್ನು ಬಲವರ್ಧನೆಗೊಳಿಸಲು ಮತ್ತಷ್ಟು ಮುಕ್ತ ಅವಕಾಶ ನೀಡಬೇಕು. ಬಹಿರಂಗವಾಗಿ ತನ್ನ ನಿರ್ಧಾರಗಳ ವಿರುದ್ಧ ಮಾತನಾಡುತ್ತಿರುವವರಿಗೆ ಕಡಿವಾಣ ಹಾಕಬೇಕು ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ವರಿಷ್ಠರಿಗೆ ಆಗ್ರಹ ಮಾಡಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಈಗಾ ಗಲೇ ಎಲ್ಲ ಮೋರ್ಚಾಗಳ ಸಮಾವೇಶಗಳನ್ನು ನಡೆಸುತ್ತಿದ್ದು, ನ.27ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಇನ್ನಿತರ ನಾಯಕರನ್ನು ಕರೆ ತರುವ ಕುರಿತು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.





