ಎನ್‌ಐಎ ಮುಖ್ಯಸ್ಥ ಶರದ್ ಕುಮಾರ‍್ ಸೇವಾ ಅವಧಿ ಇನ್ನೊಂದು ವರ್ಷ ವಿಸ್ತರಣೆ

ಹೊಸದಿಲ್ಲಿ, ಅ.29: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮುಖ್ಯಸ್ಥ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಶರದ್ ಕುಮಾರ‍್ ಅವರ ಸೇವಾ ಅವಧಿಯನ್ನು ಕೇಂದ್ರ ಸರಕಾರ ಇನ್ನೊಂದು ವರ್ಷ ವಿಸ್ತರಣೆ ಮಾಡಿದೆ.
ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ, ಕಾಶ್ಮೀರದ ಉರಿ ದಾಳಿ, ಬರ್ದ್ವಾನ್ ಸ್ಫೋಟ ಪ್ರಕರಣ, ಸಂಜೋತಾ ಸ್ಫೋಟ ಪ್ರಕರಣ, ಇಸ್ಲಾಮಿಕ್ ಸ್ಟೇಟ್ ಟೆರರ‍್ ಗ್ರೂಪ್ ಪ್ರಕರಣಕ್ಕೆ ಸಂಬಂಧಿಸಿ ಶರದ್ ಕುಮಾರ‍್ ಅವರ ನೇತೃತ್ವದ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ಶರದ್ ಕುಮಾರ‍್ ಅಧಿಕಾರದ ಅವಧಿಯನ್ನು ವಿಸ್ತರಿಸುವುದರಿಂದ ಇಂತಹ ಪ್ರಕರಣಗಳ ತನಿಖೆಗೆ ಇನ್ನಷ್ಟು ಸಹಾಯಕವಾಗಲಿದೆ ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಕುಮಾರ‍್ 1979ರ ಹರ್ಯಾಣ ಕೇಡರ‍್ ನ ಐಪಿಎಸ್ ಅಧಿಕಾರಿ. ಅವರು 2013, ಜುಲೈ 30ರಂದು ಎನ್‌ಐಎ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 2015 ಅಕ್ಟೋಬರ‍್ ನಲ್ಲಿ ನಿವೃತ್ತರಾದ ಬಳಿಕ ಅವರ ಸೇವಾ ಅವಧಿಯನ್ನು ಸರಕಾರ ಒಂದು ವರ್ಷ ವಿಸ್ತರಿಸಿತ್ತು.
Next Story





