ಸೈಕಲ್ ರಿಕ್ಷಾವಾಲನಿಗೆ ದೀಪಾವಳಿ ಉಡುಗೊರೆ ಕೊಡಿಸಿದ ಟ್ರಾಫಿಕ್ ಜಾಮ್
.jpg)
ಲಕ್ನೊ, ಅ. 29: ವಾಹನದಟ್ಟಣೆಯ ನಡುವೆ ಸಿಲುಕಿಕೊಂಡ ಉದ್ಯಮಿಯೊಬ್ಬರು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರನ್ನು ಭೇಟಿಯಾಗಲು ಸೈಕಲ್ ರಿಕ್ಷಾವನ್ನು ಆಶ್ರಯಿಸಿದ ಘಟನೆ ವರದಿಯಾಗಿದೆ. ಉತ್ತರಪ್ರದೇಶದ ಹೃದಯಭಾಗವಾದ ಲಕ್ನೊಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೇ.ಟಿ.ಎಂ. ಸಿಇಒ ವಿಜಯ ಶೇಖರ್ ವಾಹನ ದಟ್ಟಣೆಯ ಕಾರಣದಿಂದ ಕೊನೆಗೆ ಸೈಕಲ್ ರಿಕ್ಷಾವೇರಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ.
ರಿಕ್ಷಾದಲ್ಲಿ ಸಚಿವ ಮಂದಿರಕ್ಕೆ ತಲುಪಿದ ಶೇಖರ್‌ರ ಚಿತ್ರವನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ವಾಹನ ಸಂಚಾರ ದಟ್ಟಣೆಯಿಂದಾಗಿ ಪೇ.ಟಿ.ಎಂ. ಸಿಇಒ ವಿಜಯ್ ಶೇಖರ್‌ರಿಗೆ ಸೈಕಲ್ ರಿಕ್ಷಾದಲ್ಲಿ ಅವರನ್ನು ಭೇಟಿಯಾಗಲು ಬರಬೇಕಾಯಿತು ಎಂದು ಫೋಟೊದೊಂದಿಗೆ ಅಖಿಲೇಶ್ ಯಾದವ್ ಬರಹವನ್ನೂ ಹಾಕಿದ್ದಾರೆ.
ಉದ್ಯಮಿಯನ್ನು ಇಳಿಸಿ ರಿಕ್ಷಾವಾಲ ಮಣಿರಾಂ ತನ್ನ ಬಾಡಿಗೆ ಹಣ ಪಡೆದು ತೆರಳಲು ಮುಂದಾದಾಗ ಮುಖ್ಯಮಂತ್ರಿ ಅಖಿಲೇಶ್ ರಿಕ್ಷಾವಾಲನನ್ನು ಕರೆದು ಆತನ ಕುಶಲ ವಿಚಾರಿಸಿದ್ದು, ದೀಪಾವಳಿ ಕೊಡುಗೆಯಾಗಿ ಆರುಸಾವಿರ ರೂಪಾಯಿ ನೀಡಿದ್ದಾರೆ. ಅಲ್ಲದೆ ಒಂದು ಇ-ರಿಕ್ಷಾ ಹಾಗೂ ಲಕ್ನೊದಲ್ಲಿ ಒಂದುಮನೆ ಕೊಡಿಸುವ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಎಪ್ಪತ್ತೊಂದು ಗಣ್ಯರಿಗೆ ಯಶ್ ಭರ್ತಿ ಪ್ರಶಸ್ತಿ ನೀಡಿ ಸಮ್ಮಾನಿಸಿದ್ದರು. ಇದರಲ್ಲಿ ಪೇ.ಟಿ.ಎಂ. ಸಿಇಒ ವಿಜಯ್ ಶೇಖರ್ ಕೂಡಾ ಒಬ್ಬರು. ಸಂಚಾರ ದಟ್ಟಣೆಯಿಂದಾಗಿ ಅವರಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಲು ಕಷ್ಟವಾಗಿತ್ತು ಎಂದು ಅವರು ಹೇಳಿದ್ದಾರೆಂದು ವರದಿ ತಿಳಿಸಿದೆ.
A traffic jam forced Paytm CEO Vijay Shekhar Sharma to visit us in a cycle rickshaw. Lucknow Metro will help solve the traffic jams in city. pic.twitter.com/SDzZy0mjMX
— Akhilesh Yadav (@yadavakhilesh) October 27, 2016







