ಸಂಘಪರಿವಾರವನ್ನು ಹತ್ತಿಕ್ಕಲು ಸರಕಾರ ಮುಂದಾಗಲಿ: ಮುನಿಯಪ್ಪ ಆಗ್ರಹ

ಚಿತ್ರದುರ್ಗ, ಅ.29: ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಸಂಘ ಪರಿವಾರವನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮಟ್ಟಹಾಕಲಿ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.
ಹಝ್ರತ್ ಟಿಪ್ಪು ಸುಲ್ತಾನ್ ಜಯಂತೋತ್ಸವದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹಮ್ಮಿಕೊಂಡಿದ್ದ ‘ಟಿಪ್ಪು ಮತ್ತು ಕನ್ನಡನಾಡು’ ಕುರಿತ ವಿಚಾರಸಂಕಿರಣ ಕಾರ್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯ ಉಮಾಪತಿ ಕಲ್ಯಾಣ ಮಂಟಪದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಟಿಪ್ಪು ಜಯಂತಿ ಆಚರಣೆ ವಿರುದ್ಧ ಅಪಪ್ರಚಾರ ಮಾಡಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಮತ್ತು ಸಂಘ ಪರಿವಾರ ಮುಂದಾಗಿರುವುದು ಖಂಡನೀಯ. ಟಿಪ್ಪುರಂತಹ ಮಹಾನ್ ವ್ಯಕ್ತಿಯ ವಿರುದ್ಧ ಸಮಾಜಕ್ಕೆ ತಪ್ಪು ಮಾಹಿತಿ ರವಾನಿಸುವುದು ಸರಿಯಲ್ಲ. ಇಂತಹ ಚಟುವಟಿಕೆಗಳಲ್ಲಿ ತೊಡಸಿಕೊಂಡಿರುವ ಸಂಘ ಪರಿವಾರವನ್ನು ಹತ್ತಿಕ್ಕಲು ರಾಜ್ಯ ಸರಕಾರ ಮುಂದಾಗಲಿ ಎಂದು ಒತ್ತಾಯಿಸಿದರು.
ಟಿಪ್ಪು ತನ್ನ ಆಡಳಿತ ಕಾಲದಲ್ಲಿ ಅಸ್ಪಶ್ಯತೆ ನಿವಾರಣೆಗೆ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದನು ಮತ್ತು ಅನೇಕ ದೇವಸ್ಥಾನಗಳಿಗೆ ಸಹಾಯ ಮಾಡಿರುವ ಬಗ್ಗೆ ಇತಿಹಾಸದಲ್ಲೂ ದಾಖಲೆಗಳಿವೆ. ಆದರೆ, ಕೆಲವರು ಟಿಪ್ಪು ಹೆಸರಲ್ಲಿ ರಾಜಕೀಯ ಲಾಭ ಮಾಡುತ್ತಿದ್ದಾರೆ ಎಂದ ಅವರು, ಯುವಕರು ಟಿಪ್ಪುವಿನಂತೆ ದೇಶ, ಸಮಾಜ ಕಟ್ಟುವ ಕೆಲಸದಲ್ಲಿ ಮುನ್ನೆಡೆಯುವ ಜೊತೆಗೆ ಎಲ್ಲರೂ ಒಂದಾಗಿ ಶಾಂತಿ, ಸೌಹಾರ್ದ ಜೀವನ ನಡೆಸಲು ಮುಂದಾಗಬೇಕೆಂದು ಕರೆ ನೀಡಿದರು.
ದಲಿತರ ಮೇಲಿನ ಹಲ್ಲೆ ನಿಲ್ಲಲಿ:
ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕಾಗಿ ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಈ ಸಂಬಂಧ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸುವ ಜೊತೆಗೆ ದಲಿತರಿಗೆ ರಕ್ಷಣೆ ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಬಿಎಸ್ಪಿ ಕಚೇರಿಯಲ್ಲೂ ಟಿಪ್ಪು ಜಯಂತಿ:
ಟಿಪ್ಪು ಜಯಂತಿ ಸಂವಿಧಾನ ವಿರೋಧಿಯಲ್ಲ ಎಂದ ಮಾರಸಂದ್ರ ಮುನಿಯಪ್ಪ ರಾಜ್ಯ ವ್ಯಾಪ್ತಿಯಲ್ಲಿರುವ ಪ್ರತಿ ಬಿಎಸ್ಪಿ ಕಚೇರಿಯಲ್ಲೂ ಟಿಪ್ಪು ಜಯಂತಿ ಆಚರಿಸಲು ಕರೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಹಂಪಿ ವಿವಿಯ ಸಂಶೋಧಕ ಡಾ.ಅರುಣ್ ಜೋಳದಕೂಡ್ಲಿಗಿ, ದಲಿತ ಮುಖಂಡರಾದ ಪ್ರೊ.ಸಿ.ಕೆ.ಮಹೇಶ್, ಬಾಳೇಕಾಯಿ ಶ್ರೀನಿವಾಸ್, ಚಿತ್ರದುರ್ಗ ಮಾಜಿ ನಗರಸಭಾಧ್ಯಕ್ಷ ಮುಹಮ್ಮದ್ ಅಹ್ಮದ್ ಪಾಷ ಸೇರಿ ಪ್ರಮುಖರು ಹಾಜರಿದ್ದರು.







