ಮಿಶ್ರಾ ಮ್ಯಾಜಿಕ್ ; ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ 190 ರನ್ ಗಳ ಜಯ;
ದೀಪಾವಳಿಗೆ ಧೋನಿ ಬಳಗದ ಗೆಲುವಿನ ಉಡುಗೊರೆ *ಸರಣಿ 3-2 ಕೈವಶ

ವಿಶಾಖಪಟ್ಟಣ, ಅ.29: ಬಂದರು ನಗರ ವಿಶಾಖಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದ ನ್ಯೂಝಿಲೆಂಡ್ ವಿರುದ್ಧ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ನ್ಯೂಝಿಲೆಂಡ್ ವಿರುದ್ಧ 190 ರನ್‌ಗಳ ಭರ್ಜರಿ ಜಯ ದಾಖಲಿಸಿದ್ದು, ಐದು ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ವಶಪಡಿಸಿಕೊಂಡಿದೆ.
ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 270 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ದಾಳಿಗೆ ಸಿಲುಕಿ 23.1 ಓವರ್‌ಗಳಲ್ಲಿ 79 ರನ್‌ಗಳಿಗೆ ಆಲೌಟಾಗಿದ್ದು, ಭಾರತದಲ್ಲಿ ಸರಣಿ ಜಯಿಸಿ ಇತಿಹಾಸ ಬರೆಯುವ ಅಪೂರ್ವ ಅವಕಾಶವನ್ನು ಕಳೆದುಕೊಂಡಿದೆ. ಅಮಿತ್ ಮಿಶ್ರಾ 6 ಓವರ್‌ಗಳಲ್ಲಿ 18 ರನ್‌ಗೆ 5 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು.
ಮಿಶ್ರಾಗೆ ಬೆಂಬಲ ನೀಡಿದ ಅಕ್ಷರ್ ಪಟೇಲ್ 9ಕ್ಕೆ 2 ವಿಕೆಟ್ , ಜಯಂತ್ ಯಾದವ್, ಬುಮ್ರಾ ಮತ್ತು ಉಮೇಶ್ ಯಾದವ್ ತಲಾ ಒಂದು ವಿಕೆಟ್ ಹಂಚಿಕೊಂಡರು.
16ಕ್ಕೆ 8 ವಿಕೆಟ್ ಪತನ: ನ್ಯೂಝಿಲೆಂಡ್ ತಂಡ ಒಂದು ಹಂತದಲ್ಲಿ 2 ವಿಕೆಟ್ ನಷ್ಟದಲ್ಲಿ 63 ರನ್ ಗಳಿಸಿತ್ತು. ಬಳಿಕ 51 ಎಸೆತಗಳಲ್ಲಿ 16 ರನ್ ಸೇರಿಸುವಷ್ಟರಲ್ಲಿ ಉಳಿದ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟಾಯಿತು.
ನ್ಯೂಝಿಲೆಂಡ್‌ಗೆ ಗೆಲುವಿನ ಸವಾಲು ಕಠಿಣವಾಗಿತ್ತು. ಹೀಗಿದ್ದರೂ ತಂಡದ ಯಾರೂ ಕೂಡಾ ಗೆಲುವಿಗೆ ಹೋರಾಟ ನಡೆಸಲಿಲ್ಲ. ಭಾರತದ ಸಂಘಟಿತ ದಾಳಿಗೆ ಬೆದರಿ ಪೆವಿಲಿಯನ್ ಪೆರೆಡ್ ನಡೆಸಿದರು.
0.4ನೆ ಓವರ್‌ನಲ್ಲಿ ಉಮೇಶ್ ಯಾದವ್ ಎಸೆತವನ್ನು ಎದುರಿಸುವಲ್ಲಿ ಎಡವಿದ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್(0) ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆಗ ನ್ಯೂಝಿಲೆಂಡ್ ಖಾತೆ ತೆರೆದಿರಲಿಲ್ಲ. ಆರಂಭಿಕ ದಾಂಡಿಗ ಲಥಾಮ್‌ಗೆ ನಾಯಕ ಕೇನ್ ವಿಲಿಯಮ್ಸನ್ ಜೊತೆಯಾದರು. ಇವರು ತಂಡದ ಸ್ಕೋರ್‌ನ್ನು 28ಕ್ಕೆ ಏರಿಸಿದರು.6ನೆ ಓವರ್‌ನ ಕೊನೆಯ ಎಸೆತದಲ್ಲಿ ಲಥಾಮ್ ಅವರು ಬುಮ್ರಾ ಎಸೆತವನ್ನು ಎದುರಿಸಲಾರದೆ ಚೊಚ್ಚಲ ಪಂದ್ಯವನ್ನಾಡಿದ ಜಯಂತ್ ಯಾದವ್‌ಗೆ ಕ್ಯಾಚ್ ನೀಡಿದರು. ಲಥಾಮ್ 17 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ 19 ರನ್ ಗಳಿಸಿದರು.
ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. ಇವರು ಹೋರಾಟ ನಡೆಸುವ ನಿರೀಕ್ಷೆ ಮೂಡಿಸಿದ್ದರು. ಆದರೆ 14.4ನೆ ಓವರ್‌ನಲ್ಲಿ ಅಕ್ಷರ್ ಪಟೇಲ್ ಎಸೆತದಲ್ಲಿ ಜಾಧವ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ನ್ಯೂಝಿಲೆಂಡ್ ಒತ್ತಡಕ್ಕೆ ಸಿಲುಕಿತು. ವಿಲಿಯಮ್ಸನ್(27) ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
15.4ನೆ ಓವರ್‌ನ್ನು ರಾಸ್ ಟೇಲರ್(19) ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಮಿಶ್ರಾ ನ್ಯೂಝಿಲೆಂಡ್‌ಗೆ ಆಘಾತ ನೀಡಿದರು. ಬಳಿಕ ಅದೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ ವಾಟ್ಲಿಂಗ್(0) ಬೌಲ್ಡ್ ಆಗಿ ವಾಪಸಾದರು.
19ನೆ ಓವರ್‌ನ ಕೊನೆಯ ಎಸೆತದಲ್ಲಿ ಆಲ್‌ರೌಂಡರ್ ಕೋರಿ ಆ್ಯಂಡರ್ಸನ್(0) ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದ ಜಯಂತ್ ಯಾದವ್ ಚೊಚ್ಚಲ ವಿಕೆಟ್‌ನ್ನು ಯನ್ನ ಖಾತೆಗೆ ಜಮೆ ಮಾಡಿದರು.
ನಿಶಮ್(3), ಸೌಥಿ(0) ಮತ್ತು ಸೋಧಿ(0) ವಿಕೆಟ್ ಉರುಳಿಸಿದ ಮಿಶ್ರಾ 5 ವಿಕೆಟ್‌ಗಳ ಗೊಂಚಲು ಪಡೆದರು. ಅಂತಿಮವಾಗಿ ಅಕ್ಷರ್ ಪಟೇಲ್ ಅವರು ಸ್ಯಾಂಟ್ನೆರ್(4) ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ನ್ಯೂಝಿಲೆಂಡ್‌ನ ಇನಿಂಗ್ಸ್ ಮುಗಿಸಿದರು.
ಭಾರತ 269/6: ಇದಕ್ಕೂ ಮೊದಲು ಭಾರತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಅರ್ಧಶತಕಗಳ ನೆರವಿನಲ್ಲಿ ಭಾರತ 6 ವಿಕೆಟ್ ನಷ್ಟದಲ್ಲಿ 269 ರನ್ ಗಳಿಸಿತ್ತು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭದಲ್ಲಿ ಬ್ಯಾಟಿಂಗ್ ಸವಾಲಾಗಿ ಪರಿಣಮಿಸಿತ್ತು.ಭಾರತ ಮೊದಲ 10 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 45 ರನ್ ಗಳಿಸಿತ್ತು. ಅಜಿಂಕ್ಯ ರಹಾನೆ(20) ಬೇಗನೆ ಪೆವಿಲಿಯನ್ ಸೇರಿದ್ದರು. ರಹಾನೆ(20) ಬೇಗನೆ ಪೆವಿಲಿಯನ್ ಸೇರಿದರು. ಕಳೆದ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮ ಅವರು 65 ಎಸೆತಗಳಲ್ಲಿ 70 ರನ್ (5ಬೌ,3ಸಿ) ಬಾರಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ವಿರಾಟ್ ಕೊಹ್ಲಿ 65 ರನ್(76ಎ, 2ಬೌ,1ಸಿ) ಗಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರು 5 ಪಂದ್ಯಗಳಲ್ಲಿ 358 ರನ್ ಗಳಿಸಿದ್ದಾರೆ.
ಎರಡನೆ ವಿಕೆಟ್‌ಗೆ ಉಪನಾಯಕ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮ ಜೊತೆ 79 ರನ್‌ಗಳ ಜೊತೆಯಾಟ ನೀಡಿದರು. ರೋಹಿತ್ ಶರ್ಮ 153ನೆ ಎಕದಿನ ಪಂದ್ಯದಲ್ಲಿ 8ನೆ ಅರ್ಧಶತಕ ದಾಖಲಿಸಿದರು. ಕೊಹ್ಲಿ 176ನೆ ಏಕದಿನ ಪಂದ್ಯದಲ್ಲಿ 37ನೆ ಅರ್ಧಶತಕ ದಾಖಲಿಸಿದರು.
21.6ಓವರ್‌ನಲ್ಲಿ ರೋಹಿತ್ ಶರ್ಮ ಅವರು ಬೌಲ್ಟ್ ಎಸೆತದಲ್ಲಿ ನಿಶಮ್‌ಗೆ ಕ್ಯಾಚ್ ನೀಡಿದರು. ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಆಗಮಿಸಿದರು. ನಾಯಕ ಧೋನಿ ಮತ್ತು ಕೊಹ್ಲಿ ಅವರ ಜೊತೆಯಾಟದಲ್ಲಿ ತಂಡದ ಖಾತೆಗೆ 71 ರನ್ ಸೇರ್ಪಡೆಗೊಂಡಿತು. ರೋನಿ 41 ರನ್ ಗಳಿಸಿ ಸ್ಯಾಂಟ್ನೆರ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.
ಮನೀಷ್ ಪಾಂಡೆ (0) ಅವರು ಖಾತೆ ತೆರೆಯದೆ ಸೋಧಿಗೆ ವಿಕೆಟ್ ಒಪ್ಪಿಸಿದರು. 65 ರನ್ (76ಎ, 2ಬೌ,1ಸಿ) ಗಳಿಸಿದ ಕೊಹ್ಲಿ ಅವರು ಸೋಧಿ ಎಸೆತದಲ್ಲಿ ಗಪ್ಟಿಲ್‌ಗೆ ಕ್ಯಾಚ್ ನೀಡುವುದರೊಂದಿಗೆ ಭಾರತ 43.1 ಓವರ್‌ಗಳಲ್ಲಿ 220 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಆರನೆ ವಿಕೆಟ್‌ಗೆ ಕೇದಾರ್ ಜಾಧವ್ ಮತ್ತು ಅಕ್ಷರ್ ಪಟೇಲ್ 6ನೆ ವಿಕೆಟ್‌ಗೆ ಜೊತೆಯಾಗಿ ನ್ಯೂಝಿಲೆಂಡ್‌ನ ಬೌಲರ್‌ಗಳ ಬೆವರಿಳಿಸಿದರು. ಇವರ ಜೊತೆಯಾಟದಲ್ಲಿ 46 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು. ಭಾರತದ ಸ್ಕೋರ್ 250ರ ಗಡಿ ದಾಟಿತು. ಪಟೇಲ್ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 24 ರನ್ ಗಳಿಸಿ ಬೌಲ್ಟ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆದರೆ ಜಾಧವ್ ಔಟಾಗದೆ 39 ರನ್(37ಎ, 2ಬೌ,1ಸಿ) ಗಳಿಸಿ ಔಟಾಗದೆ ಉಳಿದರು. ಚೊಚ್ಚಲ ಪಂದ್ಯವನ್ನಾಡಿದ ಜಯಂತ್ ಯಾದವ್ ಔಟಾಗದೆ 1 ರನ್ ಗಳಿಸಿದರು. ಅವರು ಮೊದಲ ಪಂದ್ಯದಲ್ಲಿ 1ಕ್ಯಾಚ್, 1ವಿಕೆಟ್ ಮತ್ತು 1 ರನ್ ಮೂಲಕ ಗಮನ ಸೆಳೆದರು.
ಜಯಂತ್ ಯಾದವ್ ಅವರು ಹಾರ್ದಿಕ್ ಪಾಂಡ್ಯ ಬದಲಿಗೆ ಮತ್ತು ಜಸ್‌ಪ್ರೀತ್ ಬುಮ್ರಾ ಅವರು ಧವಳ್ ಕುಲಕರ್ಣಿ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ನ್ಯೂಝಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ 52ಕ್ಕೆ 2 ವಿಕೆಟ್, ಸೋಧಿ 66ಕ್ಕೆ 2 ವಿಕೆಟ್, ನಿಶಮ್, ಸೋಧಿ ಮತ್ತು ಸ್ಯಾಂಟ್ನೆರ್ ತಲಾ 1 ವಿಕೆಟ್ ಹಂಚಿಕೊಂಡರು.
,,,,,,,,,,,,,
ಸ್ಕೋರ್ ಪಟ್ಟಿ
ಭಾರತ 50 ಓವರ್‌ಗಳಲ್ಲಿ 269/6
ರಹಾನೆ ಸಿ ಲಥಾಮ್ ಬಿ ನಿಶಮ್20
ರೋಹಿತ್ ಶರ್ಮ ಸಿ ನಿಶಮ್ ಬಿ ಬೌಲ್ಟ್70
ಕೊಹ್ಲಿ ಸಿ ಗಪ್ಟಿಲ್ ಬಿ ಸೋಧಿ 65
ಧೋನಿ ಎಲ್‌ಬಿಡಬ್ಲು ಬಿ ಸ್ಯಾಂಟ್ನೆರ್ 41
ಪಾಂಡೆ ಸಿ ಬೌಲ್ಟ್ ಬಿ ಸೋಧಿ00
ಜಾಧವ್ ಔಟಾಗದೆ39
ಅಕ್ಷರ್ ಪಟೇಲ್ ಬಿ ಬೌಲ್ಟ್24
ಜಯಂತ್ ಯಾದವ್ ಔಟಾಗದೆ01
ಇತರೆ09
ವಿಕೆಟ್ ಪತನ: 1-40, 2-119, 3-190, 4-195, 5-220, 6-266
ಬೌಲಿಂಗ್ ವಿವರ
ಸೌಥಿ10-0-56-0
ಬೌಲ್ಟ್10-0-52-2
ನಿಶಮ್06-0-30-1
ಸ್ಯಾಂಟ್ನೆರ್ 10-0-36-1
ಸೋಧಿ10-0-66-2
ಆ್ಯಂಡರ್ಸನ್04-0-27-0
ನ್ಯೂಝಿಲೆಂಡ್ 23.1 ಓವರ್‌ಗಳಲ್ಲಿ ಆಲೌಟ್ 79
ಗಪ್ಟಿಲ್‌ಬಿ ಯಾದವ್00
ಲಥಾಮ್ ಸಿ ಜಯಂತ್ ಬಿ ಬುಮ್ರಾ19
ವಿಲಿಯಮ್ಸನ್ ಸಿ ಜಾಧವ್ ಬಿ ಪಟೇಲ್27
ಟೇಲರ್ ಸಿ ಧೋನಿ ಬಿ ಮಿಶ್ರಾ19
ನಿಶಮ್ ಬಿ ಮಿಶ್ರಾ 03
ವಾಟ್ಲಿಂಗ್ ಬಿ ಮಿಶ್ರಾ 00
ಆ್ಯಂಡರ್ಸನ್ ಎಲ್‌ಬಿಡಬ್ಲು ಬಿ ಜಯಂತ್00
ಸ್ಯಾಂಟ್ನರ್ ಬಿ ಪಟೇಲ್04
ಸೌಥಿ ಸ್ಟಂ. ಧೋನಿ ಬಿ ಮಿಶ್ರಾ00
ಸೋಧಿ ಸಿ ರಹಾನೆ ಬಿ ಮಿಶ್ರಾ00
ಬೌಲ್ಟ್ ಔಟಾಗದೆ01
ಇತರೆ06
ವಿಕೆಟ್ ಪತನ :1-0, 2-28, 3-63, 4-66, 5-66, 6-74, 7-74, 8-74, 9-76, 10-79
ವಿಕೆಟ್ ಪತನ
ಉಮೇಶ್ ಯಾದವ್ 4.0-0-28-1
ಬುಮ್ರಾ 5.0-0-16-1
ಅಕ್ಷರ್ ಪಟೇಲ್ 4.1-0-09-2
ಅಮಿತ್ ಮಿಶ್ರಾ6.1-2-18-5
ಜಯಂತ್ ಯಾದವ್4.0-0-08-1
ಪಂದ್ಯಶ್ರೇಷ್ಠ : ಅಮಿತ್ ಮಿಶ್ರಾ
,,,,,,,,,,,,,,,
ಅಂಕಿ-ಅಂಶ
*399: ವಿರಾಟ್ ಕೊಹ್ಲಿ ವಿಶಾಖಪಟ್ಟಣದಲ್ಲಿ ನಾಲ್ಕು ಪಂದ್ಯಗಳಲ್ಲಿ 399 ರನ್ ದಾಖಲಿಸಿದ್ಧಾರೆ. ಅವರು ಗಳಿಸಿರುವ ರನ್ 118, 117, 99 ಮತ್ತು 65
*358: ಕೊಹ್ಲಿ ನ್ಯೂಝಿಲೆಂಡ್ ವಿರುದ್ಧ 5 ಪಂದ್ಯಗಳಲ್ಲಿ 358 ರನ್ ಸಂಪಾದಿಸಿದ್ದಾರೆ. ದ್ವಿಪಕ್ಷೀಯ ಸರಣಿಯಲ್ಲಿ 2014ರ ಸರಣಿಯಲ್ಲಿ 361 ರನ್ ದಾಖಲಿಸಿದ್ದರು. ಗೌತಮ್ ಗಂಭೀರ್ 2010ರಲ್ಲಿ 329 ರನ್ ಗಳಿಸಿದ್ದರು.
* 244: ಲಥಾಮ್ ಭಾರತ ವಿರುದ್ಧ ಕಳೆದ ಸರಣಿಯಲ್ಲಿ 244 ರನ್ ಗಳಿಸಿದ್ದಾರೆ.
*15: ಅಮಿತ್ ಮಿಶ್ರಾ 5 ಪಂದ್ಯಗಳ ಸರಣಿಯಲ್ಲಿ 15 ವಿಕೆಟ್ ಗಳಿಸಿದ್ದಾರೆ. ಇದು ಅವರ ಎರಡನೆ ಅತ್ಯುತ್ತಮ ಸಾಧನೆ. 2013ರಲ್ಲಿ ಝಿಂಬಾಬ್ವೆ ವಿರುದ್ಧ 18 ವಿಕೆಟ್ ಪಡೆದಿದ್ದರು.
*5: ಮಿಶ್ರಾ 18ಕ್ಕೆ 5 ವಿಕೆಟ್ ಗಳಿಸಿದ್ದಾರೆ. *16: ನ್ಯೂಝಿಲೆಂಡ್ 63ಕ್ಕೆ 2 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಈ ಮೊತ್ತಕ್ಕೆ 16 ರನ್ ಸೇರಿಸುವಷ್ಟರಲ್ಲಿ ಉಳಿದ 8 ವಿಕೆಟ್‌ಗಳನ್ನು ಕಳೆದುಕೊಂಡು ರನೌಟಾಗಿತ್ತು.
*05: ನ್ಯೂಝಿಲೆಂಡ್‌ನ 5 ಮಂದಿ ದಾಂಡಿಗರು ಶೂನ್ಯಕ್ಕೆ ಔಟಾಗಿದ್ದರು.
*79: ನ್ಯೂಝಿಲೆಂಡ್ 79 ರನ್‌ಗಳಿಗೆ ಆಲೌಟಾಗಿದೆ. ಇದು ಐದನೆ ಕನಿಷ್ಠ ಮೊತ್ತ.
*190: ಭಾರತ 190 ರನ್‌ಗಳ ಭರ್ಜರಿ ಜಯ ಗಳಿಸಿದೆ.
,,,,,,,,,,,,,,,,,







