ಬಂಟ್ವಾಳ: ಬಂಟರ ಭವನ ಉದ್ಘಾಟನಾ ಸಮಾರಂಭಕ್ಕೆ ಚಾಲನೆ

ಬಂಟ್ವಾಳ, ಅ. 29: ಬಿ.ಸಿ.ರೋಡ್-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ವಳವೂರಿನಲ್ಲಿ ಸುಂದರ, ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ’ಬಂಟವಾಳದ ಬಂಟರ ಭವನ’ದ ಉದ್ಘಾಟನಾ ಸಮಾರಂಭಕ್ಕೆ ಶನಿವಾರ ಸಂಜೆ ಬಿ.ಸಿ.ರೋಡ್‌ನ ಮುಖ್ಯ ವೃತ್ತದಲ್ಲಿ ಚಾಲನೆ ನೀಡಲಾಯಿತು.
ಬಿ.ಸಿ.ರೋಡು ಮುಖ್ಯ ವೃತ್ತದಿಂದ ಬಂಟರ ಭವನದವರೆಗೆ ನಡೆದ ಹೊರೆದಿಬ್ಬಣ ಮೆರವಣಿಗೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಶೋಭಾ ಯಾತ್ರೆಗೆ ಸಂಸದ ನಳೀನ್ ಕುಮಾರ್ ಕಟೀಲ್ ಸಂಘದ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಂಟವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗರಿಗುತ್ತು, ಕಾರ್ಯಾಧ್ಯಕ್ಷ ರಾಜೇಶ್ ನಾಯ್ಕಿ ಉಳಿಪಾಡಿ ಗುತ್ತು, ಪದಾಧಿಕಾರಿಗಳಾದ ಕಿರಣ್ ಹೆಗ್ಡೆ, ಪ್ರಫುಲ್ಲ ಆರ್. ರೈ, ಚಂದ್ರಹಾಸ ಶೆಟ್ಟಿ ರಂಗೋಳಿ, ಜಗದೀಶ್ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಲೋಕನಾಥ್ ಶೆಟ್ಟಿ ಬಿ.ಸಿ.ರೋಡ್, ಸದಾನಂದ ಶೆಟ್ಟಿ ರಂಗೋಳಿ, ಶಶಿರಾಜ್ ಶೆಟ್ಟಿ ಕೊಳಂಬೆ, ಚಂದ್ರಹಾಸ ರೈ ಬಾಲಾಜಿಬೈಲು, ಕಟ್ಟಡ ಸಮಿತಿ ಸಂಚಾಲಕ ಡಾ. ಪ್ರಶಾಂತ್ ಮಾರ್ಲ, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯ ಮಡಿಲ ಪ್ರಕೃತಿ ರಮಣೀಯವಾದ ಸುಂದರ ವಿಶಾಲ ಪ್ರಾದೇಶದಲ್ಲಿ ಅಪೂರ್ವ ವಿನ್ಯಾಸದೊಂದಿಗೆ ಸಂಪೂರ್ಣ ಹವಾ ನಿಯಂತ್ರಿತವಾದ ಬಂಟರ ಭವನ ತಲೆ ಎತ್ತಿ ನಿಂತಿದ್ದು ಇದರ ಲೋಕಾರ್ಪಣಾ ಸಮಾರಂಭ ಇಂದಿನಿಂದ ಅ. 31ರವರೆಗೆ ನೆರವೇರಲಿದೆ. ಅ. 30ರಂದು ಕರ್ನಾಟಕ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್, ಹಿಂದಿ, ಕನ್ನಡ ಚಲನಚಿತ್ರ ನಟ, ನಟಿಯರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಕಾಸರಗೋಡು ಮತ್ತು ಉಡುಪಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗರಿಷ್ಟ ಸ್ಥಳಾವಕಾಶ ಮತ್ತು ಉತ್ಕೃಷ್ಟ ಗುಣಮಟ್ಟದಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಬಂಟರ ಭವನವನ್ನು ನಿರ್ಮಿಸಲಾಗಿದೆ.ಇದರಲ್ಲಿ 1,200, 1,000, 500, 250 ಮತ್ತು 100 ಹೀಗೆ ಆಸನ ಸಾಮರ್ಥ್ಯ ವುಳ್ಳ ಹವಾ ನಿಯಂತ್ರಿತ ಸಭಾಂಗಣ ಪ್ರತ್ಯೇಕ ಬಾಲ್ಕನಿ, ಪಾರ್ಕಿಂಗ್ ಮತ್ತಿತರ ಸೌಲಭ್ಯ ಹೊಂದಿದೆ.
ಚಿತ್ರ: ಕಿಶೋರ್ ಪೆರಾಜೆ







