ಬರ ಪರಿಹಾರಕ್ಕೆ ಮನವಿ : ಕೇಂದ್ರದ ಸಕಾರಾತ್ಮಕ ಸ್ಪಂದನೆ - ಕಾಗೋಡು ತಿಮ್ಮಪ್ಪ

ಬೆಂಗಳೂರು, ಅ.29: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಅಧ್ಯಯನ ತಂಡವು ನ.2ರಂದು ರಾಜ್ಯಕ್ಕೆ ಆಗಮಿಸಲಿದೆ. ಮೂರು ಗುಂಪುಗಳಾಗಿ ಆಗಮಿಸಲಿರುವ ತಂಡವು ಪ್ರತ್ಯೇಕವಾಗಿ ಪ್ರವಾಸ ಹಮ್ಮಿಕೊಳ್ಳಲಿದೆ. ರಾಜ್ಯದ ಅಧಿಕಾರಿಗಳು ಅವರಿಗೆ ಮಾಹಿತಿಗಳನ್ನು ಒದಗಿಸಲಿದ್ದಾರೆ ಎಂದರು.
ಬೀದರ್, ಕಲಬುರಗಿ, ರಾಯಚೂರು ಹಾಗೂ ಬೆಳಗಾವಿ ಸೇರಿದಂತೆ ಹಲವೆಡೆ ಅತಿವೃಷ್ಠಿಯಿಂದಾಗಿ ಸುಮಾರು 386 ಕೋಟಿ ರೂ.ನಷ್ಟವಾಗಿದೆ. ರಾಜ್ಯ ಸರಕಾರವು ಬರ ಪರಿಹಾರ ಕಾಮಗಾರಿಗಳಿಗೆ ಈಗಾಗಲೆ 360 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
ಬರ ಪರಿಹಾರ ಕಾಮಗಾರಿಗಳಿಗಾಗಿ 3733 ಕೋಟಿ ರೂ.ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೆ ರಾಜ್ಯದ 110 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನು 29 ತಾಲೂಕುಗಳನ್ನು ಬರಪೀಡಿತವೆಂದು ಗುರುತಿಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಉಕ್ಕಿನ ಸೇತುವೆಗೆ ಸಮರ್ಥನೆ: ಉಕ್ಕಿನ ಸೇತುವೆ ನಿರ್ಮಾಣದಿಂದ ಬೆಂಗಳೂರಿನ ಜನತೆಗೆ ಅನುಕೂಲವಾಗಲಿದೆ. ಪ್ರತಿಪಕ್ಷಗಳು ಇರೋದೆ ವಿರೋಧ ಮಾಡಲು. ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದಾಗ ವಿರೋಧ ಪಕ್ಷದಲ್ಲಿದ್ದ ಎಚ್.ಡಿ.ದೇವೇಗೌಡರೆ ವಿರೋಧ ಮಾಡಿದ್ದರು. ಆಗ ನಾನು ಉತ್ತರ ಕೊಟ್ಟ ದಾಖಲೆಯಿದೆ ಎಂದು ಅವರು ತಿಳಿಸಿದರು.
ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಹಸಿರುಪೀಠ ಅಸ್ತಿತ್ವದಲ್ಲೆ ಇರಲಿಲ್ಲ. ಇದ್ದಿದ್ದರೆ, ಬಹುಷಃ ಅಣೆಕಟ್ಟು ನಿರ್ಮಾಣವೆ ಆಗುತ್ತಿರಲಿಲ್ಲ. ಅನೇಕ ಗ್ರಾಮಗಳು ಹಾಗೂ ಬಂಗಾರದಂತಹ ಕಾಡು ಮುಳುಗಡೆಯಾಗುತ್ತಿರಲಿಲ್ಲ. ಜನ ಊರು ಬಿಡುವುದು ತಪ್ಪುತ್ತಿತ್ತು ಎಂದು ಕಾಗೋಡು ತಿಮ್ಮಪ್ಪ ಪ್ರತಿಕ್ರಿಯಿಸಿದರು.







