ಬೀಫ್ ತಿನ್ನುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ
ನ್ಯಾಷನಲ್ ಸ್ಯಾಂಪಲ್ ಸರ್ವೇ ಅಧ್ಯಯನದಲ್ಲಿ ಬಹಿರಂಗ

ಹೊಸದಿಲ್ಲಿ, ಅ.29: ಭಾರತದಲ್ಲಿ ಬೀಫ್ ಭಕ್ಷಕರ ಸಂಖ್ಯೆ ಜಾಸ್ತಿಯಾಗಿದೆ. ಈ ವಿಚಾರ ನ್ಯಾಷನಲ್ ಸ್ಯಾಂಪಲ್ ಸರ್ವೇಯ (ಎನ್ ಎಸ್ ಎಸ್ ಒ) ಅಧ್ಯಯನದಲ್ಲಿ ಬಹಿರಂಗಗೊಂಡಿದೆ.
ದೇಶದಲ್ಲಿ ದನ ಅಥವಾ ಕೋಣದ ಮಾಂಸ ತಿನ್ನುವವರ ಸಂಖ್ಯೆ 1999-2000ದಲ್ಲಿ 7.51 ಕೋಟಿ ಇತ್ತು. ಇದು 2011-12ರಲ್ಲಿ 8.35 ಕೋಟಿಗೆ ಏರಿದೆ.
ಕೋಣ ,ಎಮ್ಮೆ ಮಾಂಸ ಮಾರಾಟ ಮಾಡುವ ಲಕ್ನೋದ ವರ್ತಕರು ಹೇಳುವಂತೆ ರಫ್ತು ಕಾರ್ಖಾನೆಗಳು ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಗೆ ಮಾಂಸ ಪೂರೈಕೆ ಕಡಿಮೆಯಾಗುತ್ತಿದೆ.
ಎನ್‌ಎಸ್‌ಎಸ್ ಒ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಕೋಣದ ಮಾಂಸದ ಬಳಕೆ ಕಡಿಮೆಯಾಗುತ್ತಿದೆ. 1999-2000ದಲ್ಲಿ ಬಳಕೆ 1.25 ಕೋಟಿ ಕೆ.ಜಿ.ಇತ್ತು. ಆದರೆ ಇದು 2011-12ರ ವೇಳೆಗೆ 90.5 ಲಕ್ಷ ಕೆ.ಜಿಗೆ ಉಳಿದಿದೆ.
“ಲಕ್ನೋದಲ್ಲಿ ಪ್ರತಿದಿನ ಎರಡರಿಂದ ಮೂರು ಟನ್ ಕಬಾಬ್ ತಯಾರಿಸಲಾಗುತ್ತಿದೆ. ಇದಕ್ಕೆ ಪೂರೈಕೆಯಾಗುವ ಆಡಿನ ಮಾಂಸ ಸಾಕಾಗುವುದಿಲ್ಲ. ಕೊರತೆಯನ್ನು ನೀಗಿಸಲು ಕೋಣದ ಮಾಂಸ ಬಳಕೆ ಮಾಡಿದರೂ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.ಆದ್ದರಿಂದ ಬೀಫ್ ಬಳಕೆಯ ನಿಜವಾದ ಪ್ರಮಾಣ ಈ ಅಧ್ಯಯನ ಹೇಳುವುದಕ್ಕಿಂತ ಹೆಚ್ಚೇ ಇರುತ್ತದೆ” ಎಂದು ವ್ಯಾಪಾರಿಗಳು ಹೇಳುತ್ತಾರೆ.







