ದಲಿತ ಯುವತಿಯನ್ನು ಬಸ್‌ನಿಂದ ಎಳೆದು ಹಾಕಿ ಇರಿದು ಕೊಲೆ

ಭೋಪಾಲ್, ಅಕ್ಟೋಬರ್ 29: ಮಧ್ಯಪ್ರದೇಶದಲ್ಲಿ ಯುವಕನೊಬ್ಬ ದಲಿತ ಯುವತಿಯ ದೇಹಕ್ಕೆ ಪೆಟ್ರೋಲ್ ಸುರಿದ ಬಳಿಕ ಬಸ್‌ನಿಂದ ಕೆಳಗೆ ಹಾಕಿ ಇರಿದು ಕೊಂದ ಘಟನೆ ನಿನ್ನೆ ರೇವಾ ಜಿಲ್ಲೆಯಲ್ಲಿ ನಡೆದಿದೆ.
ರೇವಾ ಜಿಲ್ಲೆಯ ಕಾಲೇಜಿನಿಂದ ದೀಪಾವಳಿಗೆ ಮನೆಗೆ ಬರುತ್ತಿದ್ದ 19ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ಶಿವೇಂದ್ರ ಸಿಂಗ್ ಪರಿಹಾರ್ ನಿಷ್ಕರುಣವಾಗಿ ಇರಿದು ಸಾಯಿಸಿದ್ದಾನೆ.
ಭೋಪಾಲ್‌ನಿಂದ 600ಕಿಲೋಮೀಟರ್ ದೂರದ ಕುಸುಮಿ ಎಂಬಲ್ಲಿ ಯುವತಿಯ ಮೇಲೆ ಶಿವೇಂದ್ರ ಸಿಂಗ್ ಪರಿಹಾರ್ ದಾಳಿನಡೆಸಿದ್ದಾನೆ. ಪೆಟ್ರೋಲ್‌ನೊಂದಿಗೆ ಬಸ್ ಹತ್ತಿದ್ದ ಈತ ಯುವತಿಯ ಸಮೀಪ ಕೂತು ಬೆದರಿಕೆಯೊಡ್ಡಿದ್ದಾನೆ. ಬಳಿಕ ಇತರ ಪ್ರಯಾಣಿಕರು ಆಕೆಯನ್ನು ಬೇರೊಂದು ಸ್ಥಳದಲ್ಲಿ ಕೂರುವಂತೆ ಮಾಡಿದ್ದಾರೆ.
ಕೂಡಲೇ ಬಸ್ ನಿಲ್ಲಿಸುವಂತೆ ಗರ್ಜಿಸಿದ ಯುವಕ ಯುವತಿಯ ದೇಹಕ್ಕೆ ಪೆಟ್ರೋಲ್ ಸುರಿದು ಬಸ್ ಮುಂದಕ್ಕೆ ತೆಗೆದರೆ, ರಕ್ಷಿಸಲು ಹತ್ತಿರ ಬಂದರೆ ಸುಟ್ಟುಹಾಕುವೆ ಎಂದು ಬೆದರಿಸಿದ್ದಾನೆ. ಯುವಕ ಯುವತಿಯನ್ನು ಬಸ್‌ನಿಂದ ಹೊರಗೆ ಎಳೆದು ಹಾಕಿ ಚಾಕುವಿನಿಂದ ನಿರಂತರ ತಿವಿದ್ದಾನೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟಳು. ಪ್ರಾಥಮಿಕ ತನಿಖೆಯಲ್ಲಿ ಯುವತಿಯ ಕುರಿತು ಆರೋಪಿಗೆ ಚೆನ್ನಾಗಿ ಗೊತ್ತಿತ್ತು. ಆಕೆಯ ಹತ್ಯೆಗಾಗಿ ಆತ ಪೂರ್ವಯೋಜನೆಯೊಂದಿಗೆ ಬಸ್ ಹತ್ತಿದ್ದ ಎಂದು ತಿಳಿದು ಬಂದಿದೆ.





