ಐತ್ತೂರು ಗ್ರಾ.ಪಂ. ಅಧ್ಯಕ್ಷರ ಮೇಲಿನ ಆರೋಪ ರಾಜಕೀಯ ಪ್ರೇರಿತ : ವಾಡ್ಯಪ್ಪ ಗೌಡ ಬಿಳಿನೆಲೆ
ಕಡಬ, ಅ.29. ಇಲ್ಲಿನ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿಯವರ ಅವ್ಯವಹಾರದ ಆರೋಪ ಕಾಂಗ್ರೆಸ್ಸಿನ ರಾಜಕೀಯ ಪ್ರೇರಿತ ಆರೋಪ ಎಂದು ಬಿಜೆಪಿ ಕಡಬ ಶಕ್ತಿ ಕೇಂದ್ರ ಅಧ್ಯಕ್ಷರಾದ ವಾಡ್ಯಪ್ಪ ಗೌಡ ಬಿಳಿನೆಲೆ ಆರೋಪಿಸಿದರು.
ಅವರು ಕಡಬದಲ್ಲಿ ಶನಿವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಐತ್ತೂರು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ಪೂಜಾರಿಯವರು ಓರ್ವ ಹಿಂದುಳಿದ ವರ್ಗದ ನಾಯಕರಾಗಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಬೆಳೆಯುತ್ತಿರುವ ನಾಯಕರಾಗಿದ್ದಾರೆ. ಬಿಜೆಪಿಯಲ್ಲಿ ಹಿಂದುಳಿದ ವರ್ಗದ ನಾಯಕರು ಬೆಳೆಯುತ್ತಯಿರುವುದು ಕಾಂಗ್ರೆಸ್ ನವರಿಗೆ ಸಹಿಸಲು ಅಸಾಧ್ಯವಾದ ಕಾರಣ ಗ್ರಾ.ಪಂ.ನಲ್ಲಿ 2011ರಲ್ಲಿ ಅವ್ಯವಹಾರವಾಗಿದೆ ಎಂದು ಸುಳ್ಳು ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯ ಪ್ರಭಾವ ಬಳಸಿ ಪಂಚಾಯತ್ ಸದಸ್ಯತನವನ್ನು ರದ್ದುಪಡಿಸುವುದಕ್ಕೆ ಕ್ರಮ ಕೈಗೊಂಡಿರುವುದು ಖಂಡನೀಯ. ಕಾಂಗ್ರೆಸ್ಸಿನ ಆರೋಪ ನಿರಾಧಾರವಾಗಿದ್ದು, ಎಸ್ಸಿ, ಎಸ್ಟಿಗಳಿಗೆ ಡ್ರಮ್ ವಿತರಣೆ ಮಾಡಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸಿಗರಿಗೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಾಂಗ್ರೆಸಿನ ಕುಮಾರಿ ವಾಸುದೇವನ್ ಗ್ರಾಮ ಸಭೆಯಲ್ಲಿ ಡ್ರಮ್ ವಿತರಣೆ ಮಾಡಿರುವ ಫೋಟೋ ಸಾಕ್ಷಿಯಾಗಿದೆ. 15 ವರ್ಷಗಳಿಂದ ಸುಮ್ಮನೆ ಕುಳಿತಿದ್ದ ಕಾಂಗ್ರೆಸ್ಸಿಗರು ಸತೀಶ್ ಕೆ.ಯವರು ಬಿಜೆಪಿ ಸೇರಿದರೆಂಬ ಏಕೈಕ ಕಾರಣಕ್ಕೆ ಮಾತನಾಡಲು ಪ್ರಾರಂಭಿಸಿದ್ದಾರೆ. ಈ ರೀತಿಯ ಆಡಳಿತವನ್ನು ಅಸ್ಥಿರಗೊಳಿಸುವ ಕಾಂಗ್ರೆಸಿನ ಪ್ರಯತ್ನಕ್ಕೆ ಯಾವತ್ತೂ ಫಲ ಸಿಗಲಿಕ್ಕಿಲ್ಲ ಎಂದರು. ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವುದಕ್ಕೆ ಹಾಗೂ ಗ್ರಾಮ ಸಭೆ ನಡೆಯದಿರುವುದಕ್ಕೆ ಕಾಂಗ್ರೆಸ್ ನೇರ ಕಾರಣವಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ಜಿಲ್ಲಾ ಬಿಜೆಪಿ ಸದಸ್ಯರಾದ ಕೃಷ್ಣ ಶೆಟ್ಟಿ, ಕಡಬ ಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಮಂಡಲ ಸದಸುರಾದ ಪೂವಪ್ಪ ಗೌಡ ಐತ್ತೂರು ಉಪಸ್ಥಿತರಿದ್ದರು.





