ಮಂಗಳೂರು: ಅಕ್ರಮ ಮರಳು ಸಾಗಾಟ - ಸೊತ್ತು ವಶಕ್ಕೆ
ಮಂಗಳೂರು, ಅ. 29: ಕಣ್ಣೂರಿನಿಂದ ಮಂಗಳೂರು ಕಡೆಗೆ ಅಕ್ರಮ ಮರಳು ಹೇರಿಕೊಂಡು ಬರುತ್ತಿದ್ದ ಲಾರಿಗಳನ್ನು ಮಂಗಳೂರು ಗ್ರಾಮಾಂತ ಪೊಲೀಸರು ಪಡೀಲ್ ಜಂಕ್ಷನ್‌ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು ಗ್ರಾಮಾಂತ ಠಾಣಾ ಪೊಲೀಸ್ ನೀರೀಕ್ಷಕರು ಇಂದು ಬೆಳಗ್ಗೆ ಸುಮಾರು 5 ಗಂಟೆ ಹೊತ್ತಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಪಡೀಲ್ ಜಂಕ್ಷನ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕಣ್ಣೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿ ಕೊಂಡು ಬರುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಟಿಪ್ಪರ್ ಚಾಲಕರನ್ನು ವಿಚಾರಿಸಿ ಪರವಾನಿಗೆ ಬಗ್ಗೆ ಕೇಳಿದಾಗ ಅವರಲ್ಲಿ ಯಾವುದೇ ಪರವಾನಿಗೆ ಇರಲಿಲ್ಲ. ಮರಳನ್ನು ಅಕ್ರಮವಾಗಿ ಸಾಗಾಟವಾಗುತ್ತಿದ್ದ ಬಗ್ಗೆ ಗಮನಕ್ಕೆ ಬಂದಿದ್ದು, ಸೊತ್ತು ಸಮೇತ ಎರಡೂ ಟಿಪ್ಪರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಎರಡು ಟಿಪ್ಪರ್‌ಗಳ ವೌಲ್ಯ 15 ಲಕ್ಷ ರೂ. ಮತ್ತು ಮರಳಿನ ವೌಲ್ಯ 6 ಲಕ್ಷ ರೂ. ಅಂದಾಜಿಸಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





