ಉಡುಪಿ ಸರಕಾರಿ ಆಸ್ಪತ್ರೆಯ ಖಾಸಗೀಕರಣ, ಶಂಕುಸ್ಥಾಪನೆ ವಿರೋಧಿಸಿ ಉಪವಾಸ ಸತ್ಯಾಗ್ರಹ

ಉಡುಪಿ, ಅ.30: ಉಡುಪಿ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯ ಖಾಸಗೀಕರಣ ಹಾಗೂ ಇದರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿರುವುದನ್ನು ವಿರೋಧಿಸಿ ಉಡುಪಿಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಹಾಗೂ ಮಾಜಿ ಶಾಸಕ ಯು.ಆರ್.ಸಭಾಪತಿ ನೇತೃತ್ವದಲ್ಲಿ ಇಂದು ಉಡುಪಿ ಕ್ಲಾಕ್ ಟವರ್‌ನ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 8ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಸಿದ ಸತ್ಯಾಗ್ರಹ ದಲ್ಲಿ ಡಾ.ಪಿ.ವಿ.ಭಂಡಾರಿ ಕಪ್ಪು ಪಟ್ಟಿ ಧರಿಸಿಕೊಂಡು ವೌನವೃತವನ್ನು ಆಚರಿಸುವ ಮೂಲಕ ಆಸ್ಪತ್ರೆಯ ಖಾಸಗೀಕರಣವನ್ನು ತೀವ್ರವಾಗಿ ಖಂಡಿಸಿದರು. ಮೊಬೈಲ್ ದೂರವಿರಿಸಿ ಪುಸ್ತಕ ಓದುವ ಮೂಲಕ ಅವರು ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಯು.ಆರ್.ಸಭಾಪತಿ, ಬಿ.ಆರ್.ಶೆಟ್ಟಿಗೆ ವಹಿಸಿರುವ ಈ ಆಸ್ಪತ್ರೆಗೆ ಮುಂದೆ ವೈದ್ಯರು, ನರ್ಸ್‌ಗಳ ನೇಮಕ, ಮಾತ್ರವಲ್ಲ ಅವರ ವೇತನ ಪಾವತಿ ಕೂಡ ಖಾಸಗಿಯವರೆ ಮಾಡುತ್ತಾರೆ. ಈ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸೇವೆ ಒದಗಿಸುವುದಾಗಿ ಹೇಳುವ ಉಸ್ತುವಾರಿ ಸಚಿವರು, ಕಾರ್ಡ್ ಇಲ್ಲದ ಬಡವರು ಹೆರಿಗೆಗಾಗಿ ಎಲ್ಲಿಗೆ ಹೋಗಬೇಕು. ಇದನ್ನು ನೋಡುವಾಗ ಸಚಿವರು ಅನಿವಾಸಿ ಭಾರತೀಯ ಉದ್ಯಮಿ ಜೊತೆ ವ್ಯವಹಾರ ನಡೆಸುತ್ತಿ ರುವುದು ಕಂಡುಬರುತ್ತದೆ ಎಂದು ಆರೋಪಿಸಿದರು.
ಪಾರದರ್ಶಕವಾಗಿ ಸೇವೆ ಮಾಡುತ್ತೇನೆ ಎಂದು ಹೇಳಿದ ಉಸ್ತುವಾರಿ ಸಚಿವರು ಆಸ್ಪತ್ರೆಯ ಖಾಸಗೀಕರಣ ವಿಷಯವನ್ನು ಮುಚ್ಚಿಟ್ಟು ಯಾರಿಗೂ ಹೇಳದೆ ಗೌಪ್ಯವಾಗಿ ಈ ನಿರ್ಧಾರ ಮಾಡಿದ್ದಾರೆ. ಇದರ ಹಿಂದೆ ದುರುದ್ದೇಶ ವಿದೆ. ಆದುದರಿಂದ ಇದರ ವಿರುದ್ಧ ಮುಂದೆ ಎಲ್ಲ ರೀತಿಯ ಕಾನೂನು ಬದ್ಧ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಅಕ್ಬರ್ ಅಲಿ, ದಲಿತ ದಮನಿತರ ಸ್ವಾಭಿಮಾನಿ ಸಂಘರ್ಷ ಒಕ್ಕೂಟದ ಹುಸೇನ್ ಕೋಡಿಬೆಂಗ್ರೆ, ಜಿಲ್ಲಾ ನಾಗರಿಕರ ಸಮಿತಿಯ ನಿತ್ಯಾನಂದ ಒಳಕಾಡು, ಕರವೇ ಮುಖಂಡ ಅನ್ಸಾರ್ ಅಹ್ಮದ್, ಸಲಾವುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.







