ಕೇರಳದಲ್ಲಿನ್ನು ಎಪಿಎಲ್-ಬಿಪಿಎಲ್ ಭೇದವಿಲ್ಲದೆ ಲಭಿಸಲಿದೆ ಪಡಿತರ ಸಾಮಗ್ರಿ

ಕಾಸರಗೋಡು, ಅ.30: ಅರ್ಹ ಎಲ್ಲಾ ಕುಟುಂಬಗಳಿಗೆ ಪಡಿತರ ಸಾಮಗ್ರಿ ಒದಗಿಸಲು ಕೇರಳ ಸರಕಾರ ಮುಂದಾಗಿದ್ದು, ಇದರಿಂದ ಎಪಿಎಲ್ - ಬಿಪಿಎಲ್ ವ್ಯತ್ಯಾಸವಿಲ್ಲದೆ ಎಲ್ಲಾ ಪಡಿತರ ಚೀಟಿದಾರರಿಗೂ ಪಡಿತರ ಸಾಮಗ್ರಿ ಲಭಿಸಲಿದೆ.
ಕೇಂದ್ರದ ಆಹಾರ ಭದ್ರತಾ ಕಾಯ್ದೆಯಿಂದ ಎಪಿಎಲ್ ಸೇರಿದಂತೆ ಬಹುತೇಕ ಕುಟುಂಬಗಳು ಪಡಿತರ ಸಾಮಗ್ರಿಯಿಂದ ಹೊರಗುಳಿಯುವಂತಾಗಿದೆ. ಇದನ್ನು ಮನಗಂಡಿರುವ ಕೇರಳ ಸರಕಾರ ಈಗ ಇರುವಂತೆಯೇ ಎಲ್ಲಾ ಪಡಿತರ ಚೀಟಿದಾರರಿಗೂ ಪಡಿತರ ಸಾಮಾಗ್ರಿ ಖಾತರಿ ಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಶೀಘ್ರ ಈ ಕುರಿತು ಯೋಜನೆ ತಯಾರಿಸಲಿದೆ.
ಯೋಜನೆಗೆ ಹಣಕಾಸು ಇಲಾಖೆಯ ಅಂಗೀಕಾರ ಪಡೆಯಲು ಆಹಾರ ಸಚಿವ ಪಿ. ತಿಲೋತ್ತಮನ್ ಹಣಕಾಸು ಸಚಿವ ಥಾಮಸ್ ಐಸಾಕ್ ಜೊತೆ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯವರ ಅಂಗೀಕಾರ ಲಭಿಸಿದ ಬಳಿಕ ಎರಡು ದಿನಗಳಲ್ಲಿ ಆಹಾರ ಸಚಿವರು ಈ ಕುರಿತ ಮಾಹಿತಿಯನ್ನು ರಾಜ್ಯ ವಿಧಾನಸಭೆಯ ಮುಂದಿಡಲಿದ್ದಾರೆ.
ಆಹಾರ ಭದ್ರತಾ ಕಾಯ್ದೆಯಂತೆ ಆದ್ಯತಾ ಪಟ್ಟಿಯಂತೆ 1.54 ಕೋಟಿ ಜನರಿಗೆ ಮಾತ್ರ ಸಬ್ಸಿಡಿ ದರದಲ್ಲಿ ಪಡಿತರ ಸಾಮಗ್ರಿ ಲಭಿಸಲಿದೆ. ಈ ಹಿಂದೆ ಎಎವೈ, ಬಿಪಿಎಲ್, ಎಪಿಎಲ್ (ರಾಜ್ಯ ಸಬ್ಸಿಡಿ) ವಿಭಾಗದ 2.85 ಕೋಟಿ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಪಡಿತರ ಸಾಮಾಗ್ರಿ ಲಭಿಸುತ್ತಿತ್ತು. ಆದರೆ ಆಹಾರ ಭದ್ರತಾ ಕಾಯ್ದೆಯಂತೆ ಈಗ ಸವಲತ್ತು ಪಡೆಯುತ್ತಿರುವ 1.32 ಕೋಟಿ ಮಂದಿ ಹೊರಗುಳಿಯುತ್ತಿದ್ದಾರೆ. ಇವರಿಗೆ ಪಡಿತರ ಸಾಮಗ್ರಿ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗಿದೆ. ಈ ಹಿಂದೆ ಪಡಿತರ ಸೌಲಭ್ಯ ಪಡೆಯುತ್ತಿದ್ದ ಎಲ್ಲರಿಗೂ ಮುಂದೆಯೂ ಸವಲತ್ತು ಲಭಿಸಲಿದೆ. ಎಎವೈ ವಿಭಾಗದ 5.95 ಲಕ್ಷ , ಬಿಪಿಎಲ್ ವಿಭಾಗದ 14.80 ಲಕ್ಷ, ಎಪಿಎಲ್ ವಿಭಾಗದ ರಾಜ್ಯ ಸಬ್ಸಿಡಿ ಸಹಿತ 42 ಲಕ್ಷ ಕಾರ್ಡುದಾರರಿಗೆ ಈಗ ಇರುವಂತೆ ಸಬ್ಸಿಡಿ ದರದಲ್ಲಿ ಪಡಿತರ ಸಾಮಾಗ್ರಿ ನೀಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಪ್ರತಿವರ್ಷ ಕೇಂದ್ರ ಸರಕಾರ ಆದ್ಯತಾ ವಿಭಾಗದ ಪಡಿತರ ಚೀಟಿದಾರರಿಗೆ 14.25 ಲಕ್ಷ ಟನ್ ಆಹಾರ ಧಾನ್ಯ ವಿತರಿಸುತ್ತಿದೆ. ಈ ಪೈಕಿ 10.25 ಲಕ್ಷ ಟನ್ ಅದ್ಯತಾ ವಿಭಾಗದ ಪಡಿತರ ಚೀಟಿದಾರರಿಗೆ ಅಗತ್ಯವಾಗಿದೆ. ಉಳಿದ ನಾಲ್ಕು ಲಕ್ಷ ಟನ್ ಆದ್ಯತೇತರ ವಿಭಾಗದವರಿಗೆ ವಿತರಿಸಲಾಗುವುದು. ಹೆಚ್ಚುವರಿಯಾಗಿ ಲಭಿಸುವ ನಾಲ್ಕು ಲಕ್ಷ ಟನ್ ಅಕ್ಕಿ 8.30 ರೂ. ದರದಲ್ಲಿ, ಗೋಧಿ 6.10 ರೂ . ದರದಲ್ಲಿ ಕೇಂದ್ರದಿಂದ ಲಭಿಸಲಿದೆ. ಈ ಆಹಾರ ಧಾನ್ಯವನ್ನು ರಾಜ್ಯ ಸರಕಾರದ ಸಬ್ಸಿಡಿಯೊಂದಿಗೆ ವಿತರಿಸಬೇಕಿದೆ. ರಾಜ್ಯಕ್ಕೆ ಲಭಿಸಬೇಕಿದ್ದ ಆಹಾರ ಧಾನ್ಯವನ್ನು ಕೇಂದ್ರ ಸರಕಾರ ಕಡಿತಗೊಳಿಸಿತ್ತು, ಬಳಿಕ ರಾಜ್ಯ ಸರಕಾರ ಒತ್ತಡ ಹೇರಿದ ಪರಿಣಾಮ ಆಹಾರ ಧಾನ್ಯವನ್ನು ಮೊದಲಿನಂತೆ ಒದಗಿಸಲು ತೀರ್ಮಾನಿಸಿತ್ತು.
ಪಡಿತರ ಚೀಟಿ ಕುರಿತ ದೂರು, ತಿದ್ದುಪಡಿ ಪ್ರಕ್ರಿಯೆ ಈಗ ನಡೆಯುತ್ತಿದೆ. ಆಹಾರ ಪೂರೈಕೆ ಕಚೇರಿಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ನವಂಬರ್ 5ರ ತನಕ ಕಾಲಾವಕಾಶ ನೀಡಲಾಗಿದೆ. ನ.1ರಿಂದಲೇ ಆಹಾರ ಭದ್ರತಾ ಕಾಯ್ದೆ ಕೇರಳದಲ್ಲಿ ಜಾರಿಗೆ ಬರಲಿದೆ. ಕಾಯ್ದೆಯಂತೆ ಅರ್ಹ ಪಡಿತರ ಚೀಟಿದಾರರಿಗೆ ನ.10ರ ವೇಳೆಗೆ ಸಬ್ಸಿಡಿ ದರದಲ್ಲಿ ಪಡಿತರ ಸಾಮಾಗ್ರಿ ಲಭಿಸಲಿದೆ.







