ಕರಾವಳಿಗೆ ಪ್ರತ್ಯೇಕ ಮರಳು ನೀತಿ: ಸಿಎಂ
.jpg)
ಮಂಗಳೂರು, ಅ. 30: ಕರಾವಳಿಗೆ ಪತ್ಯೇಕ ಮರಳು ನೀತಿಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನವೆಂಬರ್ 3ರಂದು ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ದಕ್ಷಿಣ ಕನ್ನಡ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಮರಳಿನ ಸಮಸ್ಯೆ ಉಲ್ಭಣಗೊಂಡಿದ್ದು, ಇದನ್ನು ಬಗೆಹರಿಸಲು ಕರಾವಳಿಗೆ ಪ್ರತ್ಯೇಕ ಮರಳು ನೀತಿಯ ಅಗತ್ಯವಿದೆ. ಈ ಸಂಬಂಧ ನವೆಂಬರ್ 3ರಂದು ಸಭೆ ಕರೆದು ಪ್ರತ್ಯೇಕ ಮರಳು ನೀತಿ ರೂಪಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.
2 ದಿನಗಳಲ್ಲಿ ನಿಗಮ, ಮಂಡಳಿಗಳಿಗೆ ನೇಮಕ
ಮುಂದಿನ ಎರಡು ದಿನಗಳೊಳಗೆ ನಿಗಮ, ಮಂಡಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದ ಮುಖ್ಯಮಂತ್ರಿ ಅವರು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ ಎಂದರು.
ಟಿಪ್ಪು ಜಯಂತಿ ಆಚರಣೆ
ಕಳೆದ ವರ್ಷ ಆಚರಿಸಿದಂತೆ ಈ ಬಾರಿಯೂ ಸ್ವಾತಂತ್ರ ಹೋರಾಟಗಾರ ಟಿಪ್ಪು ಜಯಂತಿಯನ್ನು ಆಚರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಕೊಡಗು ಮತ್ತು ಮಂಗಳೂರಿನಲ್ಲಿ ಕಳೆದ ವರ್ಷ ಅಹಿತಕರ ಘಟನೆಗಳು ಸಂಭವಿಸಿದ ಬಗ್ಗೆ ಅವರ ಗಮನ ಸೆಳೆದಾಗ, ಕೋಮುವಾದಿಗಳಿಂದಾಗಿ ಇಂತಹ ಘಟನೆಗಳು ನಡೆದಿವೆ ಎಂದರು.
ಬೆಂಗಳೂರಿನಲ್ಲಿ ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಉಕ್ಕಿನ ಸೇತುವೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ವಿರೋಧ ವ್ಯಕ್ತಪಡಿಸಿರುವುದರ ಬಗ್ಗೆ ಕೇಳಿದಾಗ, ಡಿ.ವಿ.ಸದಾನಂದ ಗೌಡರ ಕಾಲದಲ್ಲೇಈ ಯೋಜನೆ ಪ್ರಾರಂಭಗೊಂಡಿದ್ದು, ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಉಕ್ಕಿನ ಸೇತುವೆ ನಿರ್ಮಾಣ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲಾಗಿದ್ದು, ಶೇ. 73 ಮಂದಿ ಉಕ್ಕಿನ ಸೇತುವೆ ಬೇಕು ಎಂದಿದ್ದಾರೆ. ಪ್ರಸ್ತುತ ಯೋಜನೆಯನ್ನು ತಾನು ಮಂಡಿಸಿದ ಆಯ-ವ್ಯಯದಲ್ಲಿ ಘೋಷಣೆ ಮಾಡಿದಾಗ ವಿರೋಧ ವ್ಯಕ್ತಪಡಿಸದ ಬಿಜೆಪಿಯವರು ಈಗ ಯಾಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸುಳ್ಳು ಮಾತಾಡುವುದೇ ಅವರ ಕಾಯಕವಾಗಿದೆ ಎಂದರು.
ಆರೆಸೆಸ್ ಕಾರ್ಯಕರ್ತರ ರುದ್ರೇಶ್ ಹತ್ಯೆಯ ಹಿಂದೆ ಪಿಎಫ್‌ಐ ಕೈವಾಡದ ಬಗ್ಗೆ ಪ್ರಕ್ರಿಯೆ ನೀಡಿದ ಮುಖ್ಯಮಂತ್ರಿ ಇದು ಇನ್ನೂ ದೃಢಪಟ್ಟಿಲ್ಲ ಎಂದರು.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆ ಬಗ್ಗೆ ಪ್ರಶ್ನಿಸಿದಾಗ, ಅವರು ಪಕ್ಷವನ್ನು ತೊರೆದಿರುವಾಗ ಯಾವ ಪಕ್ಷ ಸೇರ್ಪಡೆಗೊಂಡರೂ ನಮಗೆ ಸಂಬಂಧವಿಲ್ಲ ಎಂದರು.







