28 ವರ್ಷ ಕಳೆದು 50 ರೂಪಾಯಿ ಲಂಚ ಪ್ರಕರಣದಿಂದ ಮುಕ್ತಿ!

ಅಹ್ಮದಾಬಾದ್, ಅ.30: ಐವತ್ತು ರೂ.ಲಂಚ ಪ್ರಕರಣದಿಂದ ಮುಕ್ತಿ ಪಡೆಯಲು ಇಲ್ಲಿನ ಸುರೇಂದ್ರಗರಗದ ಮನಸುಖಲಾಲ್ ದೇವರಾಜ್ ನಡೆಸಿದ ಸುದೀರ್ಘ ಹೋರಾಟ ಕೊನೆಗೂ ಫಲ ನೀಡಿದೆ. 28 ವರ್ಷಗಳ ಬಳಿಕ ಗುಜರಾತ್ ಹೈಕೋರ್ಟ್ ಇವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. 1988ರಲ್ಲಿ ದೇವರಾಜ್ ವಿರುದ್ಧ 50 ರೂಪಾಯಿ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.
ಸಿದ್ಧ ಉಡುಪುಗಳ ಅಂಗಡಿ ಆರಂಭಿಸಲು ಅನುಮತಿ ನೀಡುವ ಸಂದರ್ಭದಲ್ಲಿ ಬಡಕುಟುಂಬವೊಂದರಿಂದ 50 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ದಾಖಲಿಸಿದ್ದ ದೂರು ವಿಚಾರಣೆ ನಡೆಸಿದ ನ್ಯಾಯಾಲಯ ಆರು ತಿಂಗಳು ಶಿಕ್ಷೆ ವಿಧಿಸಿ 500 ರೂಪಾಯಿ ದಂಡ ವಿಧಿಸಿತ್ತು.
ದೇವರಾಜ್ ಹಾಗೂ ಅವರ ಹಿರಿಯ ಸಹೋದ್ಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಭಂಜಿಬಾಯ್ ಗೋವಾಬಾಯ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಿದ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗಲೇ, ಭಂಜಿಬಾಯ್ ಮೃತಪಟ್ಟಿದ್ದರು.
ದೇವರಾಜ್ ಅವರ ಮೇಲ್ಮನವಿಯನ್ನು 25 ವರ್ಷಗಳ ಬಳಿಕ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ಈ ಪ್ರಕರಣ ಅತ್ಯಂತ ಹಳೆಯ ಮೇಲ್ಮನವಿ ಪ್ರಕರಣ ಎನಿಸಿಕೊಂಡಿತ್ತು. ದುರ್ಬಲ ವರ್ಗದವರಿಗೆ ಸಬ್ಸಿಡಿಯುಕ್ತ ಸಾಲ ಮಂಜೂರಾತಿ ನೀಡುವ ಹೊಣೆ ದೇವರಾಜ್ ಹಾಗೂ ಅವರ ಮೇಲಧಿಕಾರಿಯದ್ದಾಗಿತ್ತು. ಈ ಪ್ರಕರಣದಲ್ಲಿ ಸಾಲ ಮಂಜೂರಾತಿ ಮಾಡಿಸಲು 50 ರೂಪಾಯಿ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.





