ಝಾಕಿರ್ ನಾಯ್ಕ್ ಗೆ ಪಿತೃವಿಯೋಗ

ಮುಂಬೈ,ಅ.30: ಇಸ್ಲಾಮಿಕ್ ವಿದ್ವಾಂಸ ಝಾಕಿರ್ ನಾಯ್ಕ್ ಅವರ ತಂದೆ ಅಬ್ದುಲ್ ಕರೀಂ ನಾಯ್ಕ್ (87) ಅವರು ಇಂದು ಬೆಳಗಿನ ಜಾವ ಇಲ್ಲಿಯ ಮಜಗಾಂವ್‌ನಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರು ಕೆಲವು ಸಮಯದಿಂದ ಅಸ್ವಸ್ಥಗೊಂಡಿದ್ದರು. ಮಜಗಾಂವ್‌ನ ಕಬರಸ್ತಾನದಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು ಎಂದು ಝಾಕಿರ್ ನಾಯ್ಕ್ ರ ಸಹವರ್ತಿಯೋರ್ವರು ತಿಳಿಸಿದರು.
ರತ್ನಾಗಿರಿಯಲ್ಲಿ ಜನಿಸಿದ್ದ ಅಬ್ದುಲ್ ಕರೀಂ ನಾಯ್ಕ್ ವೈದ್ಯರಾಗಿದ್ದು, 1994-95ರಲ್ಲಿ ಬಾಂಬೆ ಸೈಕಿಯಾಟ್ರಿಕ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದರು.
ಢಾಕಾದಲ್ಲಿ ಈ ವರ್ಷದ ಜುಲೈನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಕೆಲವರು ಝಾಕಿರ್ ನಾಯ್ಕ್ ಅವರ ಭಾಷಣಗಳಿಂದ ಸ್ಫೂರ್ತಿ ಪಡೆದಿದ್ದರೆಂಬ ಆರೋಪಗಳ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿದ್ದು, ಆ ಸಂದರ್ಭ ವಿದೇಶ ಪ್ರವಾಸದಲಿದ್ದ ಅವರು ಈವರೆಗೂ ಭಾರತಕ್ಕೆ ವಾಪಸಾಗಿಲ್ಲ.
ಝಾಕಿರ್ ಶೀಘ್ರವೇ ಸ್ವದೇಶಕ್ಕೆ ಮರಳಿ ತನ್ನ ತಂದೆಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಲಿದ್ದಾರೆ ಎಂದು ಸಹವರ್ತಿ ತಿಳಿಸಿದರು.





