ಕೇರಳ:ಆರು ತಿಂಗಳಲ್ಲಿ 910 ಅತ್ಯಾಚಾರ ಪ್ರಕರಣಗಳು!

ತಿರುವನಂತಪುರ,ಅ.30: ಕಠಿಣ ಕಾನೂನುಗಳು ಮತ್ತು ಜಾಗ್ರತಿ ಅಭಿಯಾನಗಳ ಹೊರತಾಗಿಯೂ ಕೇರಳದಲ್ಲಿ ಈ ವರ್ಷದ ಮೊದಲ ಆರು ತಿಂಗಳಲ್ಲಿ 910 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲಿ ಮಹಿಳೆಯರ ವಿರುದ್ಧ ನಿರಂತರ ದೌರ್ಜನ್ಯವನ್ನು ಬೆಟ್ಟು ಮಾಡುತ್ತಿದೆ.
ಜುಲೈವರೆಗೆ ರಾಜ್ಯಾದಂತ ಮಹಿಳೆಯರ ವಿರುದ್ಧ ಅಪರಾಧದ ಒಟ್ಟು 7,909 ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಪೊಲೀಸರು ಬಿಡುಗಡೆಗೊಳಿಸಿರುವ ಅಂಕಿಅಂಶಗಳು ಹೇಳುತ್ತಿವೆ.
ಈ ಪೈಕಿ 2,332 ಲೈಂಗಿಕ ಕಿರುಕುಳ,190 ಚುಡಾವಣೆ ಮತ್ತು 78 ಮಹಿಳೆಯರ ಅಪಹರಣ ಪ್ರಕರಣಗಳಾಗಿದ್ದು, 910 ಅತ್ಯಾಚಾರ ಪ್ರಕರಣಗಳಿವೆ.
ಕಳೆದ ವರ್ಷ ರಾಜ್ಯದಲ್ಲಿ 1,263 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು.
ಈ ಗಾಬರಿ ಹುಟ್ಟಿಸುವ ಅಂಕಿಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಸಿ.ರೋಸಾಕುಟ್ಟಿ ಅವರು, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯಲು ಜಾಗ್ರತಿ ವಿಚಾರ ಸಂಕಿರಣಗಳು ಮತತು ತರಗತಿಗಳಷ್ಟೇ ಸಾಲದು. ತ್ವರಿತ ನ್ಯಾಯಾಲಯಗಳು ಮತ್ತು ತ್ವರಿತ ವಿಚಾರಣೆಯ ಕೊರತೆ ಅತ್ಯಾಚಾರ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಪ್ರಮುಖ ತೊಡಕುಗಳಾಗಿವೆ ಎಂದು ಹೇಳಿದರು.
ಮಹಿಳೆಯರ ವಿರುದ್ಧ ಅತ್ಯಂತ ಹೆಚ್ಚಿನ ಅಪರಾಧ ಪ್ರಕರಣಗಳು (861) ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿವೆ. ಮಲಪ್ಪುರಂನಲ್ಲಿ 106,ತಿರುವನಂತಪುರ(ಗ್ರಾಮೀಣ)ದಲ್ಲಿ 78 ಮತ್ತು ಎರ್ನಾಕುಲಂ(ಗ್ರಾಮೀಣ)ನಲ್ಲಿ 64 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.







