ಒಆರ್‌ಒಪಿ ಜಾರಿಗೆ 5,500 ಕೋ.ರೂ.:ಪ್ರಧಾನಿ ಮೋದಿ
.jpg)
ಹೊಸದಿಲ್ಲಿ,ಅ.30: ಸಮಾನ ದರ್ಜೆ ಸಮಾನ ಪಿಂಚಣಿ (ಒಆರ್‌ಒಪಿ) ಯೋಜನೆಯ ಅನುಷ್ಠಾನಕ್ಕಾಗಿ 5,500 ಕೋ.ರೂ.ಗಳನ್ನು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತಿಳಿಸಿದರು. ಇದೇ ವೇಳೆ ಪಾಕಿಸ್ತಾನದೊಂದಿಗಿನ ಗಡಿಯಲ್ಲಿ ಉದ್ವಿಗ್ನತೆಯ ನಡುವೆಯೇ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗವನ್ನು ಅವರು ಪ್ರಶಂಸಿಸಿದರು.
ಹಿಮಾಚಲ ಪ್ರದೇಶದ ಕಿನ್ನಾವುರ್ ಜಿಲ್ಲೆಯ ಸುಮ್ಡೋದಲ್ಲಿ ಇಂದು ಸೇನೆ ಮತ್ತು ಐಟಿಬಿಪಿ ಯೋಧರೊಂದಿಗೆ ದೀಪಾವಳಿಯ ಸಂಭ್ರಮವನ್ನು ಹಂಚಿಕೊಂಡ ಮೋದಿ ಈ ಬೆಳಕಿನ ಹಬ್ಬವನ್ನು ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗೆ ಅರ್ಪಿಸಿದರಲ್ಲದೆ,ಒಆರ್‌ಒಪಿ ಕುರಿತಂತೆ ತಾನು ಮಾಜಿ ಯೋಧರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಹೇಳಿದರು.
ಹಿಂದಿನ ಸರಕಾರಗಳಲ್ಲಿದ್ದ ಕೆಲವರಿಗೆ ಒಆರ್‌ಒಪಿ ಬಗ್ಗೆ ತಿಳಿದಿರಲಿಲ್ಲವಾದ್ದರಿಂದ ಕಳೆದ ನಾಲ್ಕು ದಶಕಗಳಿಂದಲೂ ಈ ವಿವಾದ ಹಾಗೆಯೇ ಉಳಿದುಕೊಂಡಿತ್ತು. ಅವರು ಈ ಉದ್ದೇಶಕ್ಕಾಗಿ ಕೇವಲ 500 ಕೋ.ರೂ.ಗಳನ್ನು ಹಂಚಿಕೆ ಮಾಡಿದ್ದರು ಎಂದರು.
ಯೋಜನೆಯು ಜಾರಿಗೊಳ್ಳದಿದ್ದರೆ ಮಾಜಿ ಯೋಧರ ಒಂದು ವರ್ಗವು ಸರಕಾರದ ವಿರುದ್ಧವಾಗುತ್ತದೆ ಎಂದು ಬಹಳಷ್ಟು ಜನರು ಭಾವಿಸಿದ್ದರು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ರೇಡಿಯೊದಲ್ಲಿ ತನ್ನ ಮಾಸಿಕ ‘ಮನ್ ಕಿ ಬಾತ್’ ಭಾಷಣದಲ್ಲಿ ದೇಶಾದ್ಯಂತ ಒಗ್ಗಟ್ಟನ್ನು ಮೂಡಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಮತ್ತು ಪ್ರತ್ಯೇಕತಾವಾದಿ ಪ್ರವೃತ್ತಿಗಳು ಮತ್ತು ಮನೋಸ್ಥಿತಿಯನ್ನು ವಿಫಲಗೊಳಿಸಲು ಶ್ರಮಿಸುವಂತೆ ಜನತೆಗೆ ಮತ್ತು ರಾಜ್ಯ ಸರಕಾರಗಳಿಗೆ ಅವರು ಕರೆ ನೀಡಿದರು.
ತನ್ನ ‘ಸೈನಿಕರಿಗೆ ಸಂದೇಶ ’ಅಭಿಯಾನಕ್ಕೆ ಸ್ಪಂದಿಸಿ ಭಾರೀ ಸಂಖ್ಯೆಯಲ್ಲಿ ಯೋಧರಿಗೆ ಸಂದೇಶಗಳನ್ನು ರವಾನಿಸಿದ್ದಕ್ಕಾಗಿ ಗಣ್ಯರು ಸೇರಿದಂತೆ ಸಾರ್ವಜನಿಕರನ್ನು ಅವರು ಪ್ರಶಂಸಿಸಿದರು.





