ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾದ ಕೆಎಸ್ಸಾರ್ಟಿಸಿ ಬಸ್: ಐಟಿಐ ವಿದ್ಯಾರ್ಥಿಗೆ ಗಾಯ
ಪುತ್ತೂರು, ಅ.30: ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದು ಬೈಕ್‌ನಲ್ಲಿ ತೆರಳುತ್ತಿದ್ದ ನರಿಮೊಗರು ಐಟಿಐ ವಿದ್ಯಾರ್ಥಿಯೊಬ್ಬ ಗಾಯಗೊಂಡ ಮತ್ತು ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಬಸ್ ನಿಲ್ಲಿಸದೇ ಹೋದ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ಸೇರಿಕೊಂಡು ಕೆಎಸ್ಸಾರ್ಟಿಸಿ ಡಿಪೊಗೆ ತೆರಳಿ ವಿಚಾರಿಸಿದ ವೇಳೆ ಅಲ್ಲಿನ ಸಿಬ್ಬಂದಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಶುಕ್ರವಾರ ರಾತ್ರಿ ನಡೆದಿದ್ದು, ಬಳಿಕ ಈ ಪ್ರಕರಣಕ್ಕೆ ರಾಜಿ ಮಾತುಕತೆಯ ಮೂಲಕ ತೆರೆ ಎಳೆಯಲಾಗಿದೆ.
ಪುತ್ತೂರು ತಾಲೂಕಿನ ಪಾಲ್ತಾಡು ಗ್ರಾಮದ ಬಂಬಿಲ ನಿವಾಸಿ, ನರಿಮೊಗರು ಐಟಿಐ ಸಂಸ್ಥೆಯ ದ್ವಿತೀಯ ವರ್ಷದ ವಿದ್ಯಾರ್ಥಿ ಸುದರ್ಶನ್ ಗಾಯಗೊಂಡವರು. ಗಾಯಾಳುವನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದರ್ಶನ್ ಶುಕ್ರವಾರ ಸಂಜೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ರಾಜಹಂಸ ಬಸ್ ಢಿಕ್ಕಿಯಾಗಿತ್ತು. ಢಿಕ್ಕಿಯ ರಭಸಕ್ಕೆ ಸುದರ್ಶನ್ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಆದರೆ ಇದನ್ನು ಗಮನಿಸದ ಬಸ್ ಚಾಲಕ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದರು. ಈ ವಿಷಯ ತಿಳಿದ ತಿಳಿದ ಸುದರ್ಶನ್‌ರ ಸ್ನೇಹಿತರಾದ ನರಿಮೊಗರು ಐಟಿಐನ ವೈಶಾಖ್, ಸಂಪತ್, ವೇಣುಗೋಪಾಲ್, ಅಖಿಲ್ ಸೇರಿಕೊಂಡು ಪುತ್ತೂರು ಮುಕ್ರಂಪಾಡಿಯಲ್ಲಿರುವ ಕೆಎಸ್ಸಾರ್ಟಿಸಿ ಡಿಪೋಗೆ ತೆರಳಿ ವಿಚಾರಿಸಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಹಲ್ಲೆ ನಡೆಸಿದರೆಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.
ವಿಚಾರ ತಿಳಿದ ಅರುಣ್ ಕುಮಾರ್ ಪುತ್ತಿಲ ಮತ್ತು ಅದೇ ಮಾರ್ಗವಾಗಿ ತೆರಳುತ್ತಿದ್ದ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೋರ್ಕರ್ ವಿದ್ಯಾರ್ಥಿಗಳ ಜೊತೆ ಕೆಎಸ್ಸಾರ್ಟಿಸಿ ಡಿಪೊಗೆ ಹೋಗಿ ಒಟ್ಟು ಘಟನೆಗಳ ಕುರಿತು ಡಿಪೊ ಮೆನೇಜರ್ ಚೆನ್ನಬಸಪ್ಪಅವರಲ್ಲಿ ವಿಚಾರಿಸಿದರು. ಮಾತುಕತೆಯ ವೇಳೆ ಡಿಪೋ ಮೆನೇಜರ್ ಚೆನ್ನಬಸಪ್ಪ, ಇಲ್ಲಿ ವಿದ್ಯಾರ್ಥಿಗಳ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದರೆಂದು ಆರೋಪಿಸಲಾಗುತ್ತಿದ್ದರೂ ಅಂತಹ ಘಟನೆ ನಡೆದಿರುವುದು ತನ್ನ ಗಮನಕ್ಕೆ ಬಂದಿಲ್ಲ. ಬಸ್ ಢಿಕ್ಕಿ ಹೊಡೆದ ಘಟನೆಯ ಕುರಿತು ತಕ್ಷಣ ದೂರು ನೀಡುತ್ತಿದ್ದರೆ ಕ್ರಮ ಕೈಗೊಳ್ಳಬಹುದಿತ್ತು. ನಮ್ಮ ಕಡೆಯಿಂದ ತಪ್ಪಾಗಿದ್ದರೆ ಗಾಯಗೊಂಡ ವಿದ್ಯಾರ್ಥಿಯ ಆಸ್ಪತ್ರೆಯ ಖರ್ಚುವೆಚ್ಚವನ್ನು ಭರಿಸಲಾಗುವುದು ಎಂದು ಭರವಸೆ ನೀಡಿದರು.
ಡಿಪೋ ಮ್ಯಾನೇಜರ್ ಭರವಸೆಯ ಮೇರೆಗೆ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಲಾಯಿತು.







