ಹಾಕಿ: ಭಾರತಕ್ಕೆ ಏಶ್ಯನ್ ಚಾಂಪಿಯನ್ಸ್ ಟ್ರೋಫಿ
ಪಾಕ್ ವಿರುದ್ಧ 3 -2 ಜಯ

ಕ್ವಾಂಟಾನ್, (ಮಲೇಷ್ಯಾ)ಅ.30: ಭಾರತ ಇಂದು ನಡೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-2 ಅಂತರದಲ್ಲಿ ಸೋಲಿಸುವ ಮೂಲಕ ಎರಡನೆ ಬಾರಿ ಚಾಂಪಿಯನ್ ಆಗಿದೆ.
ವಿಸ್ಮಾ ಬೆಲಿಯಾ ಹಾಕಿ ಸ್ಟೇಡಿಯಂನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ದೀಪಾವಳಿ ಉಡುಗೊರೆಯನ್ನು ಭಾರತದ ಅಭಿಮಾನಿಗಳಿಗೆ ಅರ್ಪಿಸಿದೆ.
2011ರಲ್ಲಿ ಚೊಚ್ಚಲ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿ ಪ್ರಶಸ್ತಿ ಜಯಿಸಿದ್ದ ಭಾರತ ಐದು ವರ್ಷಗಳ ಬಳಿಕ ಎರಡನೆ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. 2012ರಲ್ಲಿ ಭಾರತವನ್ನು ಮತ್ತು 2013ನೆ ಆವೃತ್ತಿಯಲ್ಲಿ ಜಪಾನ್‌ನ್ನು ಫೈನಲ್‌ನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದ ಪಾಕಿಸ್ತಾನಕ್ಕೆ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವ ಅವಕಾಶವನ್ನು ಭಾರತ ನಿರಾಕರಿಸಿದೆ.
ಭಾರತದ ರೂಪೆಂದರ್ ಪಾಲ್ ಸಿಂಗ್, ಅಫ್ಫಾನ್ ಯೂಸುಫ್ ಮತ್ತು ನಿಕಿನ್ ತಿಮ್ಮಯ್ಯ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಕಿಸ್ತಾನದ ಬಿಲಾಲ್ ಮತ್ತು ಎಸ್. ಅಲಿ ಅವರು ತಲಾ ಗೋಲು ಜಮೆ ಮಾಡಿದರು.
18ನೆ ನಿಮಿಷದಲ್ಲೇ ಭಾರತದ ರೂಪಿಂದರ್ ಪಾಲ್ ಸಿಂಗ್ ಗೋಲು ಜಮೆ ಮಾಡುವ ಮೂಲಕ ಭಾರತದ ಗೋಲು ಖಾತೆ ತೆರೆದಿದ್ದರು. 23ನೆ ನಿಮಿಷದಲ್ಲಿ ಅಫ್ಫಾನ್ ಯೂಸುಫ್ ಗೋಲು ಕಬಳಿಸಿ ತಂಡಕ್ಕೆ 2-0 ಮುನ್ನಡೆಗೆ ನೆರವಾದರು.
ಪಾಕಿಸ್ತಾನ ತಂಡ ತೀವ್ರ ಪೈಪೋಟಿ ನೀಡಿ 26ನೆ ನಿಮಿಷದಲ್ಲಿ ಮೊದಲ ಗೋಲು ಜಮೆ ಮಾಡಿತು. ಅಲೀಮ್ ಬಿಲಾಲ್ ಗೋಲು ಬಾರಿಸಿದರು. 38ನೆ ನಿಮಿಷದಲ್ಲಿ ಪಾಕಿಸ್ತಾನದ ಅಲಿ ಶಾನ್ ಗೋಲು ದಾಖಲಿಸಿ 2-2 ಸಮಬಲ ಸಾಧಿಸಿದರು.
ದ್ವಿತೀಯಾರ್ಧದ 51ನೆ ನಿಮಿಷದಲ್ಲಿ ನಿಕಿನ್ ತಿಮ್ಮಯ್ಯ ಗಳಿಸಿದ ಗೋಲು ಭಾರತವನ್ನು ಗೆಲುವಿನ ದಡ ಸೇರಿಸಿತು. ಪಾಕಿಸ್ತಾನ ತಂಡಕ್ಕೆ ದ್ವಿತೀಯಾರ್ಧದಲ್ಲಿ ಗೋಲು ಗಳಿಸಿಲು ಭಾರತದ ಗೋಲು ಕೀಪರ್ ಹಾಗೂ ನಾಯಕ ಪಿ.ಆರ್.ಶ್ರೀಜೇಶ್ ಅವಕಾಶ ನೀಡಲಿಲ್ಲ.
ಇದೇ ಸಂದರ್ಭದಲ್ಲಿ ಮೂರನೆ ಸ್ಥಾನಕ್ಕಾಗಿ ಪಡೆದ ಪಂದ್ಯದಲ್ಲಿ ಆತಿಥೇಯ ಮಲೇಶ್ಯ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ದಕ್ಷಿಣ ಕೊರಿಯಾವನ್ನು ಬಗ್ಗು ಬಡಿದು ನಾಲ್ಕನೆ ಬಾರಿ ಕಂಚು ಪಡೆಯಿತು.





