ಯುವಕನ ಅಪಹರಣ ಪ್ರಕರಣ: ಆರೋಪಿಗೆ ಶರ್ತಬದ್ಧ ಜಾಮೀನು

ಪುತ್ತೂರು, ಅ.30: ಪುತ್ತೂರು ನಗರದ ಬೊಳುವಾರಿನಲ್ಲಿ 8 ತಿಂಗಳ ಹಿಂದೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ನಡೆದಿದ್ದ ಬನ್ನೂರಿನ ಯುವಕನೊಬ್ಬನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಆರೋಪಿಗೆ ಪುತ್ತೂರು ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ.
ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಕಲ್ಲೇಗ ನಿವಾಸಿ ಕಾರ್ಜಾಲು ಇಬ್ರಾಹೀಂ ಯಾನೆ ಇಬ್ರಾಹೀಂ ಸುಲೈಮಾನ್‌ಗೆ ಜಾಮೀನು ಲಭಿಸಿದೆ. ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಬನ್ನೂರು ನಿವಾಸಿ ಬಿ.ಎಸ್.ಹಮೀದ್ ಎಂಬವರ ಪುತ್ರ ನೌಶಾದ್ (26) ಎಂಬಾತನನ್ನು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಕಾರಿನಲ್ಲಿ ಆಗಮಿಸಿದ್ದ ತಂಡವೊಂದು ಕಳೆದ 2016ರ ಫೆ.25ರಂದು ಪುತ್ತೂರಿನ ಬೊಳುವಾರು ಸಮೀಪದಿಂದ ಅಪಹರಿಸಿತ್ತು. ಬಳಿಕ ಆರೋಪಿಗಳ ತಂಡ ನೌಶಾದ್‌ರನ್ನು ಕೇರಳ ಮತ್ತು ತಮಿಳುನಾಡಿಗೆ ಕರೆದೊಯ್ದು ಅಲ್ಲಿನ ಲಾಡ್ಜ್‌ಗಳಲ್ಲಿ ಕೂಡಿ ಹಾಕಿ ಬಳಿಕ ಬಿಡುಗಡೆಗೊಳಿಸಿತ್ತು.
ಈ ಘಟನೆಗೆ ಸಂಬಂಧಿಸಿ ನೌಶಾದ್‌ರ ತಂದೆ ಬಿ.ಎಸ್.ಹಮೀದ್ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪಂಜಳ ನಿವಾಸಿ ಮುಹಮ್ಮದ್ ಮುಸ್ತಫ, ಕಲ್ಲೇಗ ನಿವಾಸಿ ಕಾರ್ಜಾಲ್ ಇಬ್ರಾಹೀಂ ಯಾನೆ ಇಬ್ರಾಹೀಂ ಸುಲೈಮಾನ್,ಉಪ್ಪಿನಂಗಡಿ ನಿವಾಸಿ ನೌಶಾದ್, ಪುತ್ತೂರಿನ ಕೂರ್ನಡ್ಕ ನಿವಾಸಿ ಶಕೀಲ್, ಕಬಕ ಗ್ರಾಮದ ಮುರ ನಿವಾಸಿ ನಝೀಂ, ಉಪ್ಪಿನಂಗಡಿಯ ಸಿದ್ದೀಕ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಈ ಹಿಂದೆಯೇ ಪಂಜಳ ನಿವಾಸಿಯಾದ ಮುಹಮ್ಮದ್ ಮುಸ್ತಫ ಎಂಬಾತನನ್ನು ಬಂಧಿಸಿದ್ದರು. ಕಳೆದ ಅ.20ರಂದು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಕಾರ್ಜಾಲು ಇಬ್ರಾಹೀಂ ಯಾನೆ ಇಬ್ರಾಹೀಂ ಸುಲೈಮಾನ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ಹೆಚ್ಚಿನ ತನಿಖೆಯ ದೃಷ್ಟಿಯಿಂದ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು.
ಇದೀಗ ನ್ಯಾಯಾಲಯ ಆರೋಪಿಗೆ ಶರತ್ತುಬದ್ಧ ಜಾಮೀನು ನೀಡಿದೆ. ಆರೋಪಿಯ ಪರವಾಗಿ ವಕೀಲರಾದ ಮಹೇಶ್ ಕಜೆ, ಕಿಶೋರ್ ಕೊಳತ್ತಾಯ , ಪ್ರಸಾದ್ ಕುಮಾರ್ ರೈ ಮತ್ತು ಸುಜಿತ್ ಜೋಶ್ ವಾದಿಸಿದ್ದರು.







