ಪ್ರತಿಭಟನಾಕಾರರಿಗೆ ಮಾಹಿತಿಯ ಕೊರತೆ: ಸಿಎಂ

ಉಡುಪಿ, ಅ.30: ಮಾಹಿತಿಯ ಕೊರತೆಯಿಂದ, ವಿಷಯದ ಕುರಿತು ಸರಿಯಾಗಿ ತಿಳಿದುಕೊಳ್ಳದೇ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕುರಿತಂತೆ ಪ್ರತಿಭಟನೆ, ವಿರೋಧ ವ್ಯಕ್ತವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಆಸ್ಪತ್ರೆಯ ನೂತನ ಕಟ್ಟಡದ ಶಂಕುಸ್ಥಾಪನೆಗೆ ಆಗಮಿಸಿದ ಮುಖ್ಯಮಂತ್ರಿಗಳು ಶಿಲಾನ್ಯಾಸದ ಸಂಕೇತವಾಗಿ ಗಿಡವೊಂದನ್ನು ನೆಟ್ಟು ನೀರೆರೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾವು ಆಸ್ಪತ್ರೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಅವರಿಗೆ ನೀಡುತ್ತಿಲ್ಲ. ಅಥವಾ ಮಾರಾಟವನ್ನೂ ಮಾಡುತ್ತಿಲ್ಲ. ಅದು ಸರಕಾರದ ಭಾಗವಾಗಿಯೇ ಮುಂದುವರಿಯುತ್ತದೆ. ಅದು ಸರಕಾರದ ನಿಯಂತ್ರಣದಲ್ಲೇ ಇರುತ್ತದೆ ಎಂದರು.
ಹಾಗಿದ್ದರೆ ಎಲ್ಲಾ ಪಕ್ಷದವರು ಹಾಗೂ ನಿಮ್ಮ ಪಕ್ಷದವರೇ ಆದ ಸಭಾಪತಿ ಯಾಕೆ ಪ್ರತಿಭಟನೆ ಮಾಡುತಿದ್ದಾರೆ ಎಂದು ಪ್ರಶ್ನಿಸಿದಾಗ, ಮಾಹಿತಿಯ ಕೊರತೆ ಹಾಗೂ ಕೆಲವರು ರಾಜಕೀಯ ಕಾರಣಗಳಿಗಾಗಿ ಪ್ರತಿಭಟಿಸುತಿದ್ದಾರೆ ಎಂದರು. ಹಾಗಿದ್ದರೆ ಜನರನ್ನು ಮೂರ್ಖರು ಎಂದು ಭಾವಿಸಿದ್ದೀರಾ ಎಂದಾಗ, ಇಲ್ಲ ದಕ್ಷಿಣ ಕನ್ನಡ ಜನ ಅತೀ ಬುದ್ಧಿವಂತರು ಹೀಗಾಗಿಯೇ ತಾಪತ್ರಯವಾಗುತ್ತಿರುವುದು ಎಂದರು.
ಬಿ.ಆರ್.ಶೆಟ್ಟಿ ಅವರು ಪುಕ್ಸಟೆಯಾಗಿ ಆಸ್ಪತ್ರೆ ಕಟ್ಟಿಸಿಕೊಡುತ್ತೇನೆಂದು ಮುಂದೆ ಬಂದರು. ಅವರ ಹೆತ್ತವರ ಹೆಸರಿನಲ್ಲಿ ಆಸ್ಪತ್ರೆಯನ್ನು ಕಟ್ಟಿಸಿಕೊಡುತ್ತಾರೆ. ಅದರ ನಿರ್ವಹಣೆಯನ್ನು ಸರಕಾರದ ಭಾಗವೇ ಆಗಿರುವ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮಾಡುತ್ತದೆ ಎಂದು ಸಿದ್ಧರಾಮಯ್ಯ ನುಡಿದರು.







