ಉಡುಪಿ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಸಿಎಂ ಶಂಕುಸ್ಥಾಪನೆ

ಉಡುಪಿ, ಅ.30: ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬೆಂಗಳೂರಿನ ಬಿ.ಆರ್.ಎಸ್. ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳಲಿರುವ ‘ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ’ಯ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವಿವಾರ ನೆರವೇರಿಸಿದರು.
ನಗರದ ಕೆ.ಎಂ.ಮಾರ್ಗದಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ದಾಲ್ಚೀನಿ ಗಿಡವನ್ನು ನೆಡುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಸ್ಪತ್ರೆಯ ನೂತನ ಕಟ್ಟಡದ ಶಿಲಾನ್ಯಾಸಗೈದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್, ಬಿ.ಆರ್.ಎಸ್. ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಯ ಡಾ.ಬಿ.ಆರ್.ಶೆಟ್ಟಿ, ಉಡುಪಿ ಜಿಲ್ಲಾ ಉಸ್ತು ವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಹ ಗಿಡಗಳನ್ನು ನೆಟ್ಟರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕರಾದ ಗೋಪಾಲ ಪೂಜಾರಿ, ಅಭಯ ಚಂದ್ರ ಜೈನ್, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಕೆ.ವೆಂಕಟೇಶ್, ಜಿಪಂ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.







