ಸರಕಾರಿ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಮುಖ್ಯಮಂತ್ರಿಗೆ ಮನವಿ

ಉಡುಪಿ, ಅ.30: ಹಾಜಿ ಅಬ್ದುಲ್ಲಾ ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಣ ಮಾಡಬಾರದೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹಾಗೂ ದಲಿತ ದಮನಿತರ ಸ್ವಾಭಿಮಾನಿ ಸಂಘರ್ಷ ಒಕ್ಕೂಟದ ನಿಯೋಗವು ರವಿವಾರ ಕೊಳಲಗಿರಿಯಲ್ಲಿರುವ ಸಚಿವ ಪ್ರಮೋದ್ ಮಧ್ವರಾಜ್ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಪ್ರಸ್ತುತ ಬಡವರಿಗೆ ಉತ್ತಮ ಸೇವೆ ನೀಡುತ್ತಿರುವ ಆಸ್ಪತ್ರೆಯನ್ನು ಸರಕಾರವೇ ಮುಂದುವರೆಸಬೇಕು. ಇದನ್ನು ಖಾಸಗಿಯವರಿಗೆ ನೀಡದೆ ಜನರ ಆರೋಗ್ಯದ ಹಕ್ಕನ್ನು ಉಳಿಸಬೇಕು. ಆಸ್ಪತ್ರೆಯನ್ನು ಸರಕಾರದ ಅಧೀನದಲ್ಲಿಯೇ ಇಟ್ಟುಕೊಂಡು ಅದರ ಸಣ್ಣ ಪುಟ್ಟ ಅಗತ್ಯತೆಯನ್ನು ಸರಕಾರವೇ ಪರಿಹರಿಸಿ ಇನ್ನೂ ಉತ್ತಮ ಸೇವೆ ನೀಡುವ ಮೂಲಕ ಸರಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ದಾನ ರೂಪದಲ್ಲಿ ದೇಣಿಗೆ ಪಡೆದು ಆಸ್ಪತ್ರೆ ಯನ್ನು ಅಭಿವೃದ್ಧಿ ಪಡಿಸಬೇಕೆ ಹೊರತು ಖಾಸಗಿಯವರಿಗೆ ಹಸ್ತಾಂತರ ಮಾಡಬಾರದು ಎಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಒಕ್ಕೂಟ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ಮುಖಂಡರಾದ ಹಾಜಿ ಅಬ್ದುಲ್ಲಾ ಪರ್ಕಳ, ಅಬ್ದುಲ್ ರಶೀದ್ ಖತೀಬ್, ಸಲಾವುದ್ದೀನ್, ಮುಹಮ್ಮದ್ ವೌಲಾ ಮೊದಲಾದವರು ಉಪಸ್ಥಿತರಿದ್ದರು.
ದಲಿತ ದಮನಿತರ ಒಕ್ಕೂಟ
ಸರಕಾರಿ ಆಸ್ಪತ್ರೆಯನ್ನು ಇನ್ನಷ್ಟು ಸಂಪನ್ಮೂಲ ಒದಗಿಸಿ ಅಭಿವೃದ್ದಿ ಪಡಿಸಬೇಕೆ ಹೊರತು ಯಾವುದೇ ಕಾರಣಕ್ಕೂ ಖಾಸಗಿ ಯವರಿಗೆ ನೀಡಬಾರದು. ಎಂಓಯು ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ ಆಕ್ಷೇಪಗಳನ್ನು ಸ್ವೀಕರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒಕ್ಕೂಟವು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಮಾಸ್ಟರ್, ಮುಖಂಡ ರಾದ ಶ್ಯಾಮ್‌ರಾಜ್ ಬಿರ್ತಿ, ಜಯನ್ ಮಲ್ಪೆ, ಹುಸೇನ್ ಕೋಡಿಬೆಂಗ್ರೆ, ವಿಶ್ವನಾಥ ಪೇತ್ರಿ, ಸುಂದರ ಕಪ್ಪೆಟ್ಟು, ವಿಠಲ ತೊಟ್ಟಂ, ಪ್ರಶಾಂತ್ ತೊಟ್ಟಂ, ಫಣಿರಾಜ್, ಜಿ.ರಾಜಶೇಖರ್, ಫಾ.ವಿಲಿಯಂ ಮಾರ್ಟಿಸ್, ದಿನಕರ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.







