ಲೇಔಟ್ ನಿರ್ಮಿಸಿ ಪರಿಶಿಷ್ಟರಿಗೆ ನಿವೇಶನ ನೀಡಲು ಮನವಿ

ಚಿಕ್ಕಮಗಳೂರು, ಅ.30: ರಾಜ್ಯದಲ್ಲಿ 100ಎಕರೆಗಿಂತ ಅಧಿಕ ಜಾಗ ಒಂದೇ ಕಡೆ ಲಭ್ಯವಾದಲ್ಲಿ ಲೇ ಔಟ್ ನಿರ್ಮಿಸುವುದಾಗಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಹೇಳಿಕೆ ನೀಡಿದ್ದು ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ನಗರ ಆಶ್ರಯ ಸಮಿತಿ ಹಿರೇಮಗಳೂರು ರಾಮಚಂದ್ರ ಸದಸ್ಯ ನೇತೃತ್ವದ ನಿಯೋಗ ಹೇಳಿದೆ.
ನಗರಕ್ಕೆ ಭೇಟಿ ನೀಡಿದ ಸಚಿವರನ್ನು ಸ್ವಾಗತಿಸಿದ ನಿಯೋಗವು ಮನವಿ ಸಲ್ಲಿಸಿ ಈ ಹೇಳಿಕೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯು ಶ್ರೀಮತಿ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕೇಂದ್ರವಾದ ಚಿಕ್ಕಮಗಳೂರು ನಗರದಲ್ಲಿರುವ ಎಲ್ಲ ಪರಿಶಿಷ್ಟರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವನ್ನು ವಂಶಪಾರಂಪರ್ಯವಾಗಿ ಬೆಂಬಲಿಸಿಕೊಂಡು ಬಂದಿದ್ದಾರೆ ಎಂದಿದ್ದಾರೆ.
ನಗರದ ವಾರ್ಡ್‌ಗಳಲ್ಲಿ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಬಡಾವಣೆಗಳಾದ ಹಿರೇಮಗಳೂರು, ಶಂಕರಪುರ, ದಂಟರಮಕ್ಕಿ, ಚಿಕ್ಕಕುರುಬರಹಳ್ಳಿ, ಕರ್ತಿಪೇಟೆ, ರಾಮನಹಳ್ಳಿ, ಕೆಂಪನಹಳ್ಳಿ, ಬಸವನಹಳ್ಳಿ(ಸಂತೆ ಮೈದಾನ), ಉಪ್ಪಳ್ಳಿ, ಗವನಹಳ್ಳಿ ಹಾಗೂ ಉಂಡೇದಾಸರಹಳ್ಳಿ ಗ್ರಾಮಗಳಲ್ಲಿ ಸುಮಾರು 25 ಸಾವಿರ ಪರಿಶಿಷ್ಟರು ವಾಸವಿದ್ದು, ಕಳೆದ ಸುಮಾರು 50 ವರ್ಷಗಳಿಂದಲೂ ಪರಿಶಿಷ್ಟರಿಗೆ ನಿವೇಶನದ ಕೊರತೆಯಿರುವುದರಿಂದ ಒಂದು ಮನೆಯಲ್ಲಿ 3-4 ಜನ ಅಣ್ಣ ತಮ್ಮಂದಿರು ಭಾಗ ಮಾಡಿಕೊಂಡು ಸಂದಿಗ್ಧ ಪರಿಸ್ಥಿತಿಯಲ್ಲಿ ವಾಸ ಮಾಡುತ್ತಾ ಬದುಕುತ್ತಿದ್ದಾರೆೆ.
ಆದ್ದರಿಂದ ಇವರಿಗೆ ಸರಕಾರವು ಜಾಗ ಖರೀದಿಸಿ ನಗರದಲ್ಲಿ ಲೇಔಟ್ ನಿರ್ಮಾಣ ಮಾಡಿ ನಿವೇಶನ ನೀಡಿದರೆ ವ್ಯವಸ್ಥಿತವಾಗಿ ಮನೆ ನಿರ್ಮಿಸಿ ಜೀವನ ನಡೆಸಲು ಅನುಕೂಲವಾಗಲಿದೆ. ಇದರಿಂದ ಸರಕಾರದ ಯೋಜನೆಗಳು ಪರಿಶಿಷ್ಟರಿಗೆ ಲಭ್ಯವಾಗಲಿವೆ.ಈ ಬಗ್ಗೆ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು ಅವರು, ಸರಕಾರದ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿರುವರು ಎಂದು ಸಚಿವರು ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಾಂತಕುಮಾರ್, ಸದಸ್ಯರು, ಅಕ್ರಮ-ಸಕ್ರಮ ಸಮಿತಿ, ಎಂ.ಮಲ್ಲೇಶ್, ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಘಟಕ, ಮುಖಂಡರಾದ ನೇತ್ರಾವತಿ, ರವಿಕುಮಾರ್, ಗಣೇಶ, ಮುನಿಸ್ವಾಮಿ ಹಾಜರಿದ್ದರು.







