ಮಕ್ಕಳ ಮನಸ್ಸು ಸರ್ವರಿಗೂ ಬೆಳಕು ಚೆಲ್ಲುವ ದೀವಿಗೆ: ವಿನ್ಸೆಂಟ್ ಡಿಸೋಜ
ಚಿಣ್ಣರ ವಾರ್ಷಿಕೋತ್ಸವ

ಮೂಡಿಗೆರೆ, ಅ.30: ದೀಪಾವಳಿಯ ಬೆಳಕು ಹೇಗೆ ಸರ್ವರಿಗೂ ಬೆಳಕು ನೀಡುತ್ತದೋ ಹಾಗೆಯೇ ಮಕ್ಕಳ ಮುಗ್ಧ ಮನಸ್ಸಿನ ಚಟುವಟಿಕೆ ಎಲ್ಲರ ಮನಸ್ಸಿಗೂ ದೀವಿಗೆಯಾಗಿದೆ ಎಂದು ಬಣಕಲ್ ಬಾಲಿಕಾ ಮರಿಯ ಚರ್ಚ್‌ನ ಸಹಾಯಕ ಗುರುಗಳಾದ ಫಾದರ್ ವಿನ್ಸೆಂಟ್ ಡಿಸೋಜ ಅಭಿಪ್ರಾಯಪಟ್ಟರು.
ಅವರು ನಗರದ ನಝರೆತ್ ಶಾಲೆಯಲ್ಲಿ ನಡೆದ ಚಿಣ್ಣರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಲ್ಲಿಯೇ ಮಕ್ಕಳನ್ನು ತಿದ್ದಿ ಶಿಕ್ಷಣ ನೀಡುವುದರಲ್ಲಿ ಶಿಕ್ಷಕರ ಶ್ರಮ ಬಹುಪಾಲು. ಎಚ್ಚರಿಕೆಯಿಂದ ಶಿಕ್ಷಕರು ತಮ್ಮ ಕಾರ್ಯ ನಿರ್ವಹಿಸಬೇಕು ಎಂದರು.
ಬಣಕಲ್ ಗ್ರಾಪಂ ಪಿಡಿಒ ಚಂದ್ರಾವತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳು ಬಹಳ ವಿರಳ. ಬಜರೆತ್ ಶಾಲೆಯಲ್ಲಿ ಕಲಿತ ಮಕ್ಕಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದಾರೆ ಎಂದರು.
ಶಾಲಾ ಪ್ರಾಂಶುಪಾಲೆ ಸಿಸ್ಟರ್ ಬ್ಲ್ಯಾಂಚ್ ಕೊರೆಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪೋಷಕರು ಮಕ್ಕಳ ಜೊತೆ ಶೈಕ್ಷಣಿಕ ವಿಷಯದಲ್ಲಿ ಆಸಕ್ತಿ ವಹಿಸಿ ಮಕ್ಕಳಿಗೆ ವಿದ್ಯಾಭ್ಯಾಸದ ಒಲವು ಮೂಡಿಸುತ್ತಾರೆ ಎಂದರು.
ಪೋಷಕರ ಪರವಾಗಿ ಸುಂದರೇಶ್ ಬಾನಳ್ಳಿ ಮಾತನಾಡಿ, ಚಿಣ್ಣರ ನೃತ್ಯ ಹಾಗೂ ನಿರರ್ಗಳವಾಗಿ ಮಾತನಾಡುತ್ತಿದ್ದ ಶೈಲಿ ನಮಗೆ ಹೆಮ್ಮೆ ಎನಿಸುತ್ತದೆ. ಇಂತಹ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಶೈಲಿಯನ್ನೇ ಬದಲಾಯಿಸಿವೆ ಎಂದರು.
ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಕ್ಷಿ ಕುಣಿತ, ಚಿಟ್ಟೆ ಕುಣಿತ, ರಾಜರಾಣಿಯರ ವೇಷ ನೃತ್ಯ, ಚಿಣ್ಣರ ಕಾರ್ಯಕ್ರಮ ನಿರ್ವಹಣೆ, ಸಮೂಹ ನೃತ್ಯ, ಸಿಂಡ್ರೆಲಾ ನಾಟಕ, ಪಾಶ್ಚಾತ್ಯ ನೃತ್ಯ, ಪಂಜಾಬಿ ನೃತ್ಯ, ಕರ್ನಾಟಕ ಸಂಸ್ಕೃತಿಯ ವೇಷಭೂಷಣಗಳು ಗಮನ ಸೆಳೆದವು. ಕಾರ್ಯಕ್ರಮವನ್ನು ಲವಕುಮಾರ್ ನಿರ್ವಹಿಸಿದರು. ಸಿಸ್ಟರ್ ಸ್ವರ್ಣಲತಾ ವಂದಿಸಿದರು.







