ನೂರಕ್ಕೂ ಅಧಿಕ ವಾಹನಗಳು ಗುಜರಿಗೆ
ಅಬಕಾರಿ ದಾಳಿ

ಶ್ರೀನಿವಾಸ್ ಬಾಡ್ಕರ್
ಕಾರವಾರ, ಅ.30: ಅಬಕಾರಿ ಇಲಾಖೆಯ ಅಧಿಕಾರಿಗಳು ವಿವಿಧ ಪ್ರಕರಣಗಳಲ್ಲಿ ಎರಡು ವರ್ಷದ ಅವಧಿಯಲ್ಲಿ ಸುಮಾರು 48ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಗಳಿಗೆೆ ಸೇರಿದ ಅಕ್ರಮ ಮದ್ಯಗಳನ್ನು ವಶಪಡಿಸಿಕೊಂಡಿದ್ದು ದಂಡ, ಮದ್ಯದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಕೋಟ್ಯಂತರ ರೂ. ರಾಜಧನದ ಪಾಲಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯ ಸಾಗಾಟದ ಸಂದರ್ಭದಲ್ಲಿ ದಾಳಿ ನಡೆಸಿದಾಗ ಜಪ್ತಿ ಮಾಡಿಕೊಂಡ ನೂರಕ್ಕೂ ಹೆಚ್ಚು ವಾಹನಗಳು ಇಲಾಖೆಯ ಆವರಣದಲ್ಲೇ ಇದೆ. ವಾಹನಗಳಿಗೆ ಸಂಬಂಧಿಸಿದ ಮಾಲಕರು ಮರಳಿ ಪಡೆಯದೆ ಹಾಗೂ ಇಲಾಖೆಯವರು ಹರಾಜು ಹಾಕದೆ ಇದ್ದುದರಿಂದ ಹಲವು ವಾಹನಗಳು ಗುಜರಿ ಹಾಕುವ ಹಂತಕ್ಕೆ ತಲುಪಿವೆ. 2015-16ರಲ್ಲಿ ಜಿಲ್ಲೆಯ ಒಟ್ಟು 2,875 ಭಾಗಗಳಲ್ಲಿ ದಾಳಿ ನಡೆದಿದ್ದು, ಅಬಕಾರಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಒಟ್ಟು 19,25,610 ರೂ ಮೊತ್ತದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅದರಂತೆ 2016-17ನೆ ಸಾಲಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. 1,201 ಸಲ ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಒಟ್ಟು 28,83,650 ರೂ. ಮೊತ್ತದ ಮದ್ಯ ವಶಕ್ಕೆ ಪಡೆಯಲಾಗಿದೆ.
2015ರಿಂದ ಇಲ್ಲಿವರೆಗೆ 212 ಪ್ರಕರಣಗಳನ್ನು ಗಂಭೀರ ಪ್ರಕರಣದಡಿ ದಾಖಲಿಸಿ, 74 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಸನ್ನದ್ದು ಷರತ್ತುಗಳನ್ನು ಉಲ್ಲಂಘನೆ ಮಾಡಿದ ಆರೋಪದಡಿ 180 ಪ್ರಕರಣ ಹಾಗೂ ಗೂಡಂಗಡಿ ಸೇರಿದಂತೆ ಇತರೆ ಭಾಗಗಳಲ್ಲಿ ದಾಳಿ ನಡೆಸಿದ 330 ಪ್ರಕರಣ ದಾಖಲಾಗಿದೆ. ಈ ಪ್ರಕರಣದಡಿ ಒಟ್ಟು 357 ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ.
ರಾಜಧನಕ್ಕೆ ಸೇರಿದ ಕೋಟ್ಯಂತರ ರೂ
ಕಳೆದ ವರ್ಷದಲ್ಲಿ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಬಳಿಕ ಹಾಕಿದ ದಂಡ ಇನ್ನಿತರ ಕಾರಣಗಳಿಂದ ಒಟ್ಟು 6,64,17,925 ರೂ. ರಾಜಧನ ಸಂಗ್ರಹಿಸಲಾಗಿದೆ. ಅಲ್ಲದೆ ಪ್ರಸಕ್ತ ವರ್ಷದಲ್ಲಿ ರಾಜಧನವು ಶೇ.26.20ರಷ್ಟು ಏರಿಕೆಯಾಗಿದೆ. ಒಟ್ಟು 8,38,19,212 ರೂ. ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಸಲ 5 ತಿಂಗಳಲ್ಲಿಯೇ 1,74,01,287 ರೂ. ನಿವ್ವಳ ಹೆಚ್ಚಿಗೆ ರಾಜಧನ ಇಲ್ಲಿ ಅಬಕಾರಿ ಇಲಾಖೆಯಿಂದ ಬಂದಿದೆ. ಇದರಲ್ಲಿ ಮದ್ಯದ ಮೇಲಿನ ತೆರಿಗೆ, ಬಾರ್‌ಗಳಿಗೆ ಪರವಾನಿಗೆ ಮೊತ್ತವು ಸೇರಿದೆ.
ಅಧಿಕಾರಿಗಳ ಕಣ್ಣುತಪ್ಪಿಸಿ ಅಕ್ರಮ
ಅಬಕಾರಿ ಇಲಾಖೆಯ ಅಧಿಕಾರಿಗಳು ಎಷ್ಟೇ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕರ್ನಾಟಕದ ಗಡಿ ಮಾಜಾಳಿ ಚೆಕ್‌ಪೋಸ್ಟ್‌ನಿಂದ ವಿವಿಧ ವಾಹನಗಳಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಗೋವಾದ ಅಕ್ರಮ ಮದ್ಯ ಸಾಗಾಟವಾಗುತ್ತಿದೆ.
ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಿಂದ ಪಾರಾಗಿ ಬೇರೆ ಬೇರೆ ತಾಲೂಕಿನಲ್ಲಿ ವಶಪಡಿಸಿಕೊಂಡಿರುವ ಪ್ರಕರಣಗಳು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅಲ್ಲದೆ ಸಮುದ್ರ, ರೈಲ್ವೆ ಮಾರ್ಗವಾಗಿಯೂ ಗೋವಾದ ಅಕ್ರಮ ಮದ್ಯ ಸಾಗಾಟವಾಗುತ್ತಿದ್ದು ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ.
ಗುಜರಿಯಾಗುತ್ತಿರುವ ವಾಹನಗಳು
ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದಾಗ ಜಪ್ತಿ ಮಾಡಿಕೊಂಡಿರುವ ಅನೇಕ ವಾಹನಗಳು ಅಬಕಾರಿ ಇಲಾಖೆಯ ಆವರಣದಲ್ಲೇ ಇದ್ದು ಸಂಪೂರ್ಣವಾಗಿ ಗುಜರಿ ಹಂತಕ್ಕೆ ತಲುಪಿವೆ. ವಶಕ್ಕೆ ತೆಗೆದುಕೊಂಡ ಬಳಿಕ ವಾಹನ ಮಾಲಕರು ದಂಡವನ್ನು ಕಟ್ಟಿ ಈ ವಾಹನಗಳನ್ನು ಬಿಡಿಸಿಕೊಳ್ಳಬೇಕು. ಇದಕ್ಕೆ ಹೆಚ್ಚಿನವರು ಮುಂದೆ ಬಂದಿಲ್ಲ. ಅಲ್ಲದೇ ಅಬಕಾರಿ ಇಲಾಖೆಯವರು ಈ ಎಲ್ಲ ವಾಹನಗಳನ್ನು ಹರಾಜು ಹಾಕಿಲ್ಲ.
ಮದ್ಯ ಸಾಗಾಟದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡ ಅನೇಕ ವಾಹನಗಳನ್ನು ಮಾಲಕರು ಬಿಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ವಶಕ್ಕೆ ತೆಗೆದುಕೊಂಡು ಎಫ್‌ಐಆರ್ ದಾಖಲಾದ ಮೇಲೆ ಅಬಕಾರಿ ಇಲಾಖೆಯಿಂದ ಆರ್‌ಟಿಒಗೆ ಬರೆದು ವಾಹನದ ಮೌಲ್ಯಮಾಪನ ಪಡೆಯಲಾಗುತ್ತದೆ. ಮಾಲಕರು ವಾಹನ ಬಿಡಿಸಿಕೊಳ್ಳಬೇಕಾದರೆ ಆರ್‌ಟಿಒ ಮೌಲ್ಯಮಾಪನ ಮಾಡಿದಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಯನ್ನು ಅಬಕಾರಿ ಇಲಾಖೆಗೆ ನೀಡಬೇಕು. ವಾಹನ ಬಿಡಿಸಿಕೊಂಡ ಮೇಲೆ ಅಬಕಾರಿ ಇಲಾಖೆಯ ಪರವಾನಿಗೆ ಪಡೆಯುವ ಪೂರ್ವದಲ್ಲಿ ವಾಹನವನ್ನು ರಿಪೇರಿ, ಬೇರೆ ರಾಜ್ಯಕ್ಕೆ ಒಯ್ಯುವಂತಿಲ್ಲ.
- ಸೂರ್ಯಕಾಂತ ಜಿಂದೇ, ಅಬಕಾರಿ ಉಪ ಆಯುಕ್ತ







