ಅರಣ್ಯವಾಸಿಗಳ ಸಾಗುವಳಿ ಸಮಸ್ಯೆ ಈಡೇರಿಕೆಗೆ ಆಗ್ರಹ
ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆಯಿಂದ ಮನವಿ
ಕಾರವಾರ, ಅ.30: ಜಿಲ್ಲೆಯಲ್ಲಿರುವ ಅರಣ್ಯವಾಸಿಗಳ ಸಾಗುವಳಿ ಹಕ್ಕಿನ ಸಮಸ್ಯೆಗಳ ಕುರಿತು ಜಿಲ್ಲಾ ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆಯ ವತಿಯಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ 10,571 ಚ.ಕಿ.ಮೀ. ಇದೆ. ಅದರಲ್ಲಿ ಸುಮಾರು 8,500 ಚ.ಕಿ.ಮೀ. ಅರಣ್ಯ ಪ್ರದೇಶವಾಗಿರುವುದನ್ನು ಭೌಗೋಳಿಕವಾಗಿ ವಿಶ್ಲೇಶಿಸಬಹುದು. ಜಿಲ್ಲೆಯ ಒಟ್ಟು ಜನಸಂಖ್ಯೆ 14 ಲಕ್ಷ. ಜನರು ವಾಸ್ತವ್ಯಕ್ಕಾಗಿ, ಸಾಗುವಳಿಗಾಗಿ ಅರಣ್ಯ ಪ್ರದೇಶವನ್ನೇ ಅವಲಂಬಿತವಾಗಿರುವುದು ಅನಿವಾರ್ಯವಾಗಿದೆ. ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಕುಟುಂಬ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದೆ.
ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 1/3 ಅಂಶ ಜನರು ಅರಣ್ಯವಾಸಿಗಳಾಗಿದ್ದಾರೆ. ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕು ನೀಡುವ ದಿಶೆಯಲ್ಲಿ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆ 2006ನ್ನು ಜಾರಿಗೆ ಬಂದಿದೆ. ಅದರಂತೆ ನಿಯಮಾವಳಿಗಳು 2008ರಲ್ಲಿ ರೂಪಿತಗೊಂಡು ಬಳಿಕ ಕಾಯ್ದೆಗೆ ಸೆಪ್ಟಂಬರ್ 6, 2012 ರಂದು ತಿದ್ದುಪಡಿಯಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ವಾಸಿಸುವ ಅರಣ್ಯ ವಾಸಿಗಳಿಗೆ ‘ಅರಣ್ಯ ಹಕ್ಕು ಕಾಯ್ದೆ’ ಒಂದು ವರದಾನ. ಕಾರಣ, ಅರಣ್ಯ ವಾಸಿಗಳ ಸಾಗುವಳಿ ಹಕ್ಕನ್ನು ನೀಡುವ ಈ ಕಾಯ್ದೆಯಿಂದ ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳನ್ನು ಬಗೆಹರಿಸುವುದು ಅತಿ ಅವಶ್ಯವಾಗಿದೆ. ಆದರೆ, ಮಂಜೂರು ಪ್ರಕ್ರಿಯೆಯಲ್ಲಿ ಕಾನೂನು ಜಾರಿಯಲ್ಲಿ ಗೊಂದಲ, ಪದೇ ಪದೇ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ, ಪೂರ್ಣಪ್ರಮಾಣದ ಇಚ್ಛಾಶಕ್ತಿ ಕೊರತೆಯಿಂದ ಕಾಯ್ದೆ ಅನುಷ್ಠಾನದಲ್ಲಿ ಹಿನ್ನೆಡೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿ್ದಾರೆ.
ಅರಣ್ಯ ಹಕ್ಕು ಮಂಜೂರಿಯ ಪ್ರಗತಿಯಲ್ಲಿ ಹಿನ್ನೆಡೆ:
ಹೋರಾಟ ಸಮಿತಿಗೆ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ ಇಲ್ಲಿ ಯವರೆಗೆ ನೀಡಿರುವ ಸಾಗುವಳಿ ಹಕ್ಕಿನ ಸಂಖ್ಯೆಯನ್ನು, ಗ್ರಾಮ ಅರಣ್ಯ ಹಕ್ಕು ಸಮಿತಿಗಳು ಸ್ವೀಕರಿಸಿದ ಅರ್ಜಿಗಳಿಗೆ ತುಲನಾತ್ಮಕ ವಾಗಿ ನೋಡಿದಾಗ ಕೇವಲ ಶೇ 2.2 ರಷ್ಟು ಅರಣ್ಯವಾಸಿಗಳ ಅರ್ಜಿಗಳಿಗೆ ಮಾನ್ಯತೆ ದೊರಕಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ 92,779 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಪರಿಶಿಷ್ಟ ಪಂಗಡ 3,374 ಪಾರಂಪರಿಕ ಅರಣ್ಯವಾಸಿಗಳು 84,069 ಹಾಗೂ ಸಮೂಹ ಉದ್ದೇಶಗಳ 3,315 ಅರ್ಜಿಗಳು ಸೇರಲ್ಪಟ್ಟಿದೆ. ಕಾಯ್ದೆ ಜಾರಿಯ ದಶಕದ ಅಂಚಿನಲ್ಲಿ ದೊರಕಿರುವ ಸಾಗುವಳಿ ಹಕ್ಕುಪತ್ರ ಕೇವಲ 2,028. ಅದರಲ್ಲಿ ಪರಿಶಿಷ್ಟ ಪಂಗಡ 1,239 ಮತ್ತು ಸಮೂಹ ಉದ್ದೇಶಕ್ಕೆ 546. ಈ ಪ್ರಗತಿಯು ಅರಣ್ಯವಾಸಿಗಳಿಗೆ ಹಕ್ಕು ಪಡೆಯಲು ಹಿನ್ನೆಡೆಯಾಗಿದೆ. ಬಂದಿರುವ ಅರ್ಜಿಗಳಲ್ಲಿ ಪಾರಂಪರಿಕ ಅರಣ್ಯವಾಸಿಗಳ ಅರ್ಜಿಗಳ ಶೇ.92 ರಷ್ಟಿದ್ದು, ಅವುಗಳಲ್ಲಿ ಇಲ್ಲಿಯವರೆಗೆ ಕೇವಲ ಶೇ.0.28 ರಷ್ಟು ಕುಟುಂಬಗಳಿಗಾಗಿ ಮಾತ್ರ ಸಾಗುವಳಿ ಹಕ್ಕು ದೊರಕಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಪಾರಂಪರಿಕ ಅರಣ್ಯವಾಸಿಗಳ 84,069 ಅರ್ಜಿಗಳಲ್ಲಿ ಇಲ್ಲಿಯವರೆಗೆ ಕೇವಲ 243 ಅರ್ಜಿಗಳಿಗೆ ಮಾನ್ಯತೆ ದೊರಕಿದೆ. ಸಕಾರಾತ್ಮಕವಾಗಿ ಅರಣ್ಯವಾಸಿಗಳ ಅರ್ಜಿಗಳಿಗೆ ಕಾನೂನಾತ್ಮಕ ಪುರಸ್ಕಾರ ಸಿಗದಿದ್ದರೆ ಮುಂದೊಂದು ದಿನ ಅರಣ್ಯವಾಸಿಗಳ ಅರಣ್ಯ ಭೂಮಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಒಳಪಡುವುದರಲ್ಲಿ ಸಂಶಯವಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಹಕ್ಕುದಾರರ ಹೆಸರು ಕಂದಾಯ ದಾಖಲೆಯಲ್ಲಿಲ್ಲ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಜಿಲ್ಲೆಯಲ್ಲಿ ಜನವರಿಯ ವೇಳೆ 2,028 ಹಕ್ಕುಪತ್ರ ನೀಡಿಲಾಗಿದೆ. ಇಲ್ಲಿಯವರೆಗೆ ಯಾವ ಹಕ್ಕುದಾರನ ಹೆಸರನ್ನೂ ಸರಕಾರಿ ದಾಖಲೆಗಳಲ್ಲಿ ದಾಖಲಿಸಿಲ್ಲ. ಈ ಕಾಯ್ದೆ ನಿಯಮಾವಳಿ 8(ಎಫ್)ರಲ್ಲಿ ಜಿಲ್ಲಾ ಮಟ್ಟದ ಸಮಿತಿಯು ಹಕ್ಕು ದಾಖಲೆಗಳನ್ನೊಳಗೊಂಡಂತೆ ಅರಣ್ಯ ಹಕ್ಕುಗಳನ್ನು ಸಂಬಂಧಪಟ್ಟ ಸರಕಾರಿ ದಾಖಲೆಗಳಲ್ಲಿ ಸೇರಿಸುವುದಕ್ಕೆ ನಿರ್ದೇಶನಗಳನ್ನು ನೀಡಬೇಕಾಗಿದೆ. ಅಲ್ಲದೆ, ರಾಜ್ಯ ಸರಕಾರವು 2014ರ ಮಾರ್ಚ್ 4ರಂದು ಸ್ಪಷ್ಟ ಆದೇಶವನ್ನು ಸಚಿವ ಸಂಪುಟ ಉಪ ಸಮಿತಿಯ ಸೂಚನೆಯಂತೆ ಸಚಿವ ಸಂಪುಟದ ಅನುಮೋದನೆಯ ಮೇರೆಗೆ ಆದೇಶವಾಗಿ ಎರಡು ವರ್ಷವಾದರೂ ಪಹಣಿ ಪತ್ರಿಕೆ ಹಾಗೂ ಅರಣ್ಯ ಇಲಾಖೆ ದಾಖಲೆಗಳಲ್ಲಿ ಸಾಗುವಳಿದಾರರ ಹಕ್ಕನ್ನು ನಮೂದಿಸಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ನಿರ್ದಿಷ್ಟ ದಾಖಲೆಗೆ ಒತ್ತಾಯಿಸಬೇಕಾಗಿಲ್ಲ:
ಉಪ ವಿಭಾಗೀಯ ಮತ್ತು ಜಿಲ್ಲಾ ಮಟ್ಟದ ವಿಭಾಗೀಯ ಸಮಿತಿಯ ನಿಯಮಗಳನ್ನು ನಿರ್ದೇಶಿಸುವಾಗ ಹಕ್ಕಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ, ಸಾಕ್ಷಿಗಳನ್ನು ಆಧರಿಸಲು ಒತ್ತಾಯ ಪಡಿಸುವಂತಿಲ್ಲ ಎಂದು ಕಲಂ- 12ಎ ಉಪ ಕಲಂ 11 ರಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ ಎಂಬಿತ್ಯಾದಿ ವಿಷಯಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.







