ದುಬೈ, ಶಾರ್ಜಾ ವಿಮಾನನಿಲ್ದಾಣ 1 ತಾಸು ಸ್ಥಗಿತ

ಇಸ್ಲಾಮಾಬಾದ್,ಅ,30: ಅನಧಿಕೃತ ಡ್ರೋನ್ ವಿಮಾನವೊಂದರ ಹಾರಾಟದ ಹಿನ್ನೆಲೆಯಲ್ಲಿ ದುಬೈ ಹಾಗೂ ಶಾರ್ಜಾಗಳ ಅಂತರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಶುಕ್ರವಾರ ರಾತ್ರಿ ಒಂದು ತಾಸಿಗೂ ಹೆಚ್ಚು ಕಾಲ ವಿಮಾನಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
‘‘ಅನಧಿಕೃತ ಡ್ರೋನ್ ವಿಮಾನವೊಂದರ ಚಟುವಟಿಕೆಯ ಹಿನ್ನೆಲೆಯಲ್ಲಿ ದುಬೈ ವಿಮಾನನಿಲ್ದಾಣದ ಸುತ್ತಮುತ್ತಲಿನ ವಾಯುಕ್ಷೇತ್ರವನ್ನು ಶುಕ್ರವಾರ ಸಂಜೆ 7.25ರಿಂದ ರಾತ್ರಿ 8.45ರವರೆಗೆ ಮುಚ್ಚುಗಡೆಗೊಳಿಸಲಾಗಿತ್ತು ಹಾಗೂ ವಿಮಾನನಿಲ್ದಾಣಕ್ಕೆ ಬರುತ್ತಿದ್ದ 22 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿತ್ತು’’ ದುಬೈ ವಿಮಾನನಿಲ್ದಾಣದ ಹೇಳಿಕೆಯು ತಿಳಿಸಿದೆ. ‘‘ಸುರಕ್ಷತೆಯು ನಮ್ಮ ಪ್ರಥಮ ಆದ್ಯತೆಯಾಗಿದೆ. ನಿಯಂತ್ರಣ ಪ್ರಾಧಿಕಾರಗಳ ಅನುಮತಿ ಪಡೆಯದೆ ಡ್ರೋನ್ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ವಿಮಾನ ನಿಲ್ದಾಣದ ಹಾಗೂ ವಿಮಾನ ಇಳಿಯುವ ಸ್ಥಳದ 5 ಕಿ.ಮೀ.ವ್ಯಾಪ್ತಿಯೊಳಗಿನ ಪ್ರದೇಶ ಸೇರಿದಂತೆ ನಿರ್ಬಂಧಿತ ಪ್ರದೇಶಗಳನ್ನು ಡ್ರೋನ್ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ’’ಎಂದು ದುಬೈ ವಿಮಾನನಿಲ್ದಾಣದ ಮೂಲಗಳು ತಿಳಿಸಿವೆ.
ದುಬೈ ವಿಮಾನನಿಲ್ದಾಣದ ಬಳಿ ಡ್ರೋನ್ ಹಾರಾಟ ಪತ್ತೆಯಾದ ಹಿನ್ನೆಲೆಯಲ್ಲಿ ಶಾರ್ಜಾ ವಿಮಾನನಿಲ್ದಾಣದ ಎಂಟು ವಿಮಾನಗಳ ಹಾರಾಟಕ್ಕೂ ಅಡ್ಡಿಯುಂಟಾಗಿತ್ತು. ಶಾರ್ಜಾ ಹಾಗೂ ದುಬೈ ವಿಮಾನನಿಲ್ದಾಣಗಳು ಸಮಾನ ವಾಯುಮಾರ್ಗಗಳನ್ನು ಹಂಚಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ. ಶಾರ್ಜಾದಲ್ಲಿ ಸುಮಾರು ರಾತ್ರಿ 8 ಗಂಟೆಯ ಹೊತ್ತಿಗೆ ವಿಮಾನನಿಲ್ದಾಣವನ್ನು ಮುಚ್ಚುಗಡೆಗೊಳಿಸಲಾಗಿದ್ದು, 9 ಗಂಟೆಯ ವೇಳೆ ಹಾರಾಟವನ್ನು ಪುನರಾಂಭಿಸಲಾಗಿತ್ತು.
ಕಳೆದ ಜೂನ್‌ನಲ್ಲಿಯೂ ಡ್ರೋನ್ ವಿಮಾನವೊಂದರ ಹಾರಾಟದ ಹಿನ್ನೆಲೆಯಲ್ಲಿ ದುಬೈ ವಿಮಾನನಿಲ್ದಾಣವನ್ನು ಸುಮಾರು 55 ನಿಮಿಷಗಳ ಕಾಲ ಮುಚ್ಚುಗಡೆಗೊಳಿಸಲಾಗಿತ್ತು. ಯುಎಇನ ನಾಗರಿಕ ವಾಯುಯಾನ ಪ್ರಾಧಿಕಾರವು ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸೇರದಂತೆ ನಾಲ್ಕು ವಿಮಾನನಿಲ್ದಾಣಗಳನ್ನು ಡ್ರೋನ್ ಹಾರಾಟ ನಿಷೇಧಿಸಿತ್ತು. ಅಲ್ ಮಖ್ತೂಮ್ ವಿಮಾನನಿಲ್ದಾಣ, ಅಲ್ ಮಿನ್‌ಹಾದ್ ವಾಯುನೆಲೆ ಹಾಗೂ ಪಾಮ್ ಜುಮೈರಾ ವಿಮಾನನಿಲ್ದಾಣ ಇವು ಯುಎಇನ ಇತರ ಮೂರು ಡ್ರೋನ್ ಹಾರಾಟ ನಿಷೇಧಿತ ವಲಯಗಳಾಗಿವೆ.







