ಟಿಪ್ಪು-ಶಿವಾಜಿ ದೇಶದ ಎರಡು ಕಣ್ಣುಗಳು
ಮಾನ್ಯರೆ,
ಟಿಪ್ಪು ಮತ್ತು ಶಿವಾಜಿಯನ್ನು ಉಳಿದ ರಾಜರ ಸಾಲಿನಲ್ಲಿ ನಿಲ್ಲಿಸದೆ ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ. ಇವರು ರಾಜ ಪ್ರಭುತ್ವವನ್ನು ವೈಭವೀಕರಿಸಿದವರಲ್ಲ. ಜನಸಾಮಾನ್ಯರ ನಡುವಿನಿಂದ ಎದ್ದ ನಾಯಕರು ಇವರು. ಹಾಗೆಯೇ ಜನ ಸಾಮಾನ್ಯರ ಜೊತೆಗೆ ತಮ್ಮ ನಾಡನ್ನು ಕಟ್ಟಿದವರು. ಅವರಿಗಾಗಿ ಮಿಡಿದವರು. ಟಿಪ್ಪು ದಲಿತರಿಗೆ, ರೈತರಿಗಾಗಿ ಬಹಳಷ್ಟು ಕೆಲಸವನ್ನು ಮಾಡಿದ್ದಾನೆ. ಅಂತೆಯೇ ಶಿವಾಜಿಯೂ ದಲಿತರು, ಮುಸಲ್ಮಾನರು, ಆದಿವಾಸಿ ಜನರನ್ನು ಸೇರಿಸಿಕೊಂಡು ನಾಡನ್ನು ಕಟ್ಟಿದ. ಶಿವಾಜಿಯ ಆಡಳಿತದಲ್ಲಿ ಆತನ ಪ್ರಮುಖ 11 ದಂಡನಾಯಕರು ಮುಸ್ಲಿಮರಾಗಿದ್ದರು. ಜಾತ್ಯತೀತವಾಗಿರುವ ಮನಸ್ಸೊಂದನ್ನು ಇವರ ಆಡಳಿತದಲ್ಲಿ ಕಾಣಬಹುದು. ಆದುದರಿಂದ ಇವರು ಭಾರತದ ಎರಡು ಕಣ್ಣುಗಳು. ಶಿವಾಜಿಯ ಅನಂತರ, ಆಡಳಿತವನ್ನು ಕೈವಶ ಮಾಡಿಕೊಂಡ ಬ್ರಾಹ್ಮಣ ಪೇಶ್ವೆಗಳು ತಮ್ಮ ಜಾತೀಯತೆಯ ಕಾರಣದಿಂದ, ಲೂಟಿಕೋರತನದಿಂದ ಸರ್ವನಾಶವಾದುದನ್ನು ನಾವು ನೋಡಿದ್ದೇವೆ. ಒಬ್ಬ ರಾಜ ಹೇಗಿರಬೇಕು ಎನ್ನುವುದಕ್ಕೆ ನಾವು ಶಿವಾಜಿ ಮತ್ತು ಟಿಪ್ಪುವನ್ನು ನೆನೆಯಬೇಕಾಗಿದೆ.
ಇದೇ ಸಂದರ್ಭದಲ್ಲಿ ಈ ದೇಶದ ಆತ್ಮವಾಗಿರುವ ಸಾಮ್ರಾಟ ಅಶೋಕನನ್ನೂ ನೆನೆಯಬೇಕಾಗಿದೆ. ಸಮಗ್ರ ಭಾರತ ಒಂದಾಗಿದ್ದು ಈತನ ಆಡಳಿತ ಕಾಲದಲ್ಲಿ. ಭಾರತದ ಉಳಿದ ಬಹುತೇಕ ಅರಸರು ತುಂಡರಸರು. ಭಾರತದ ಏಕೈಕ ಸಾಮ್ರಾಟ ಅಶೋಕ. ಹಾಗೆಯೇ ಶೌರ್ಯ, ತ್ಯಾಗ ಎರಡರಲ್ಲೂ ಗುರುತಿಸಿಕೊಂಡಾತ. ಆದುದರಿಂದ ಟಿಪ್ಪು ಜಯಂತಿ, ಶಿವಾಜಿ ಜಯಂತಿ ಮತ್ತು ಅಶೋಕ ಜಯಂತಿಯನ್ನು ಆಚರಿಸುವುದು ಈ ದೇಶದ ಗುರುತಿಸುವಿಕೆಯ ಭಾಗವಾಗಿದೆ. ಸರಕಾರ ಅಶೋಕ ಜಯಂತಿಯನ್ನೂ ಆಚರಿಸಲು ಕಾರ್ಯಕ್ರಮ ರೂಪಿಸಬೇಕಾಗಿದೆ.





