ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಲಿ
ಮಾನ್ಯರೆ,
ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿವೆ. ಇದೇ ಸಂದರ್ಭದಲ್ಲಿ ಜೆಡಿಎಸ್ ಸೇರುವ ಬಗ್ಗೆಯೂ ಮಾತುಗಳಿವೆ. ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರಿದರೆ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಅವರು ಹತಾಶೆಯ ಸ್ಥಿತಿಯಲ್ಲಿದ್ದಾರೆ. ಆದರೆ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರಿದರೆ ಅಲ್ಲಿ ಅವರಿಗೆ ಕಾಂಗ್ರೆಸ್‌ನಲ್ಲಿ ಸಿಕ್ಕಿದ ಮನ್ನಣೆ ಸಿಗುತ್ತದೆ ಎಂದು ನಿರೀಕ್ಷಿಸುವಂತೆ ಇಲ್ಲ. ಯಾಕೆಂದರೆ, ಈಗಾಗಲೇ ಅಲ್ಲಿ ಹಸಿದ ತೋಳಗಳು ಅಧಿಕಾರಕ್ಕಾಗಿ ತಮ್ಮ ನಾಯಕನನ್ನೇ ಬಲಿ ಹಾಕಲು ಹೊಂಚು ಹಾಕುತ್ತಿವೆ. ಹೀಗಿರುವಾಗ, ಹೊರಗಿನಿಂದ ಬಂದಿರುವ ಶ್ರೀನಿವಾಸ ಪ್ರಸಾದ್‌ಗೆ, ಅವರ ಯೋಜನೆ, ಆದರ್ಶಗಳಿಗೆ ಅಲ್ಲಿ ಅವಕಾಶ ಸಿಗುವುದು ಅನುಮಾನ. ಇನ್ನು ಜೆಡಿಎಸ್ ತಂದೆ ಮಕ್ಕಳ ಪಕ್ಷ. ಅದಕ್ಕೆ ದೊಡ್ಡ ವ್ಯಾಪ್ತಿ ಇಲ್ಲ. ದೇವೇಗೌಡ ಹೆಸರಿಗಷ್ಟೇ ಅಲ್ಲಿ ನಾಯಕರಾಗಿದ್ದಾರೆ. ಮಕ್ಕಳೇ ಅವರನ್ನು ನಿಯಂತ್ರಿಸುತ್ತಿದ್ದಾರೆ. ಕುಮಾರಸ್ವಾಮಿಯಂತಹ ಕಿರಿಯರ ಕೈಯಲ್ಲಿ ಬಾ, ಹೋಗು ಎಂದು ಅನ್ನಿಸಿಕೊಳ್ಳಬೇಕಾದಂತಹ ಸ್ಥಿತಿ ಶ್ರೀನಿವಾಸ ಪ್ರಸಾದ್ ಅವರದ್ದಾಗುತ್ತದೆ.
ಇದಕ್ಕಿಂತ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ, ಸದ್ಯಕ್ಕೆ ದುರ್ಬಲ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಹೋರಾಟದಲ್ಲಿ ಮುಂದುವರಿಯುವುದು ಅವರ ಘನತೆಗೆ ಸೂಕ್ತ. ದಲಿತರು, ಹಿಂದುಳಿದವರ್ಗ, ಅಲ್ಪಸಂಖ್ಯಾತರನ್ನು ಸಂಘಟಿಸಿ, ಆ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಅವರ ಮುಸ್ಸಂಜೆಯ ಬದುಕು ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಇಲ್ಲವಾದರೆ ಯಾರದೋ ಮೇಲಿನ ಸಿಟ್ಟಿಗೆ ತನ್ನದೇ ಮೂಗನ್ನು ಕತ್ತರಿಸಿಕೊಂಡಂತಾಗಬಹುದು ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಬದುಕು.





