ಪುತ್ತೂರಿನಲ್ಲಿ ರಸ್ತೆ ಬದಿಯ ವಾರದ ಸಂತೆಗೆ ಸಂಪೂರ್ಣ ತಡೆ
ಬಿಗಿ ಪೊಲೀಸ್ ಬಂದೋಬಸ್ತು, ಸಂತೆ ವ್ಯಾಪಾರಸ್ಥರ ತೆರವು

ಪುತ್ತೂರು,ಅ.31 : ಪುತ್ತೂರಿನ ಕಿಲ್ಲೆ ಮೈದಾನ ಮತ್ತು ಅದರ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ ಬಳಿಕವೂ ನಗರದ ರಸ್ತೆಗಳ ಬದಿಗಳಲ್ಲಿ ಕೆಲವು ಸಣ್ಣ ವ್ಯಾಪಾರಿಗಳು ವ್ಯಾಪಾರ ಮುಂದುವರಿಸಿದ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗಿನಿಂದಲೇ ನಗರದ ವಿವಿದೆಡೆಗಳಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಿ ರಸ್ತೆ ಬದಿಗಳಲ್ಲಿ ನಡೆಯುವ ಸಂತೆಯನ್ನು ತಡೆಯುವ ಕೆಲಸ ನಡೆಯಿತು. ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಪೊಲೀಸ್ ಬಿಗುಭದ್ರತೆ ಏರ್ಪಡಿಸಲಾಗಿತ್ತು. ಇದರಿಂದಾಗಿ ಪುತ್ತೂರು ನಗರದಲ್ಲಿ ಸಂತೆ ವ್ಯಾಪಾರ ಸಂಪೂರ್ಣ ಬಂದ್ ಆಯಿತು.
ಪುತ್ತೂರಿನ ಕಿಲ್ಲೆ ಮೈದಾನ ಮತ್ತು ಅದರ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಉಪವಿಭಾಗಾಧಿಕಾರಿಗಳ ಆದೇಶದಂತೆ ಒಂದೂವರೆ ತಿಂಗಳ ಹಿಂದೆ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಆದರೂ ಕೆಲವೊಬ್ಬರು ವ್ಯಾಪಾರಿಗಳು ಎಪಿಎಂಸಿ ಪ್ರಾಂಗಣಕ್ಕೆ ಹೋಗದೆ ಈ ಹಿಂದಿನಂತೆಯೇ ನಗರದ ರಸ್ತೆ ಬದಿಗಳಲ್ಲಿ ವ್ಯಾಪಾರ ಮುಂದುವರಿಸಿದ್ದರು. ಎಪಿಎಂಸಿಯಲ್ಲಿ ವ್ಯಾಪಾರ ಆರಂಭಿಸಿದ್ದ ವ್ಯಾಪಾರಿಗಳು ಅಲ್ಲಿ ವ್ಯಾಪಾರವಿಲ್ಲದ ಕಾರಣ ಕಳೆದ ಸೋಮವಾರ ಸಂತೆ ವ್ಯಾಪಾರ ಸ್ಥಗಿತಗೊಳಿಸಿ ನಗರಸಭಾ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದರು. ನಗರದಲ್ಲಿಯೇ ತಮಗೆ ಸಂತೆ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಡಿ, ಇಲ್ಲದಿದ್ದರೆ ನಾವು ಮುಂದಿನ ಸೋಮವಾರ ಕಿಲ್ಲೆ ಮೈದಾನದಲ್ಲಿಯೇ ಸಂತೆ ವ್ಯಾಪಾರ ಆರಂಭಿಸುತ್ತೇವೆ ಎಂದು ಎಚ್ಚರಿಸಿದ್ದರು.
ಈ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗಿನಿಂದಲೇ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ವಿವಿದೆಡೆಗಳಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಿ, ರಸ್ತೆ ಬದಿಗಳಲ್ಲಿ ನಡೆಯುತ್ತಿದ್ದ ಸಂತೆ ವ್ಯಾಪಾರವನ್ನು ತಡೆಯುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯಿತು. ಮುಂಜಾನೆ ವೇಳೆ ನಗರಕ್ಕೆ ಆಗಮಿಸಿದ್ದ ಕೆಲವು ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ವ್ಯಾಪಾರ ಆರಂಭಿಸುವ ಮುನ್ನವೇ ಅವರನ್ನು ಅಲ್ಲಿಂದ ತೆರವುಗೊಳಿಸಲಾಯಿತು. ದೀಪಾವಳಿ ಪ್ರಯುಕ್ತ ರಸ್ತೆ ಬದಿಗಳಲ್ಲಿ ಹೂವಿನ ವ್ಯಾಪಾರ ಮಾಡಲು ಬಂದಿದ್ದ ಹೋವಿನ ವ್ಯಾಪಾರಿಗಳಿಗೂ ಅವಕಾಶ ನೀಡದೆ ತೆರವುಗೊಳಿಸುವ ಕಾರ್ಯ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಪೊಲೀಸರಿಂದ ನಡೆಯಿತು.
ಎಪಿಎಂಸಿಯಲ್ಲೂ ವ್ಯಾಪಾರ ಕಡಿಮೆ
ನಗರದ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಲು ಪೊಲೀಸರು ಅವಕಾಶ ನೀಡದ ಕಾರಣ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ಕೂಡ ಎಪಿಎಂಸಿ ಪ್ರಾಂಗಣಕ್ಕೇ ಹೋಗಬೇಕಾಯಿತು. ಇದರಿಂದಾಗಿ ಇಂದು ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರಿಗಳ ಸಂಖ್ಯೆ ವೃದ್ಧಿಸುವಂತಾಯಿತು.ಆದರೆ ಸಂತೆ ವ್ಯಾಪಾರ ವೃದ್ಧಿಯಾಗಿಲ್ಲ. ಗ್ರಾಹಕರು ಇಲ್ಲಿಗೆ ಬರುತ್ತಿಲ್ಲ. ನಮಗೆ ವ್ಯಾಪಾರವಿಲ್ಲ . ನಗರಸಭೆಯವರು ಪುತ್ತೂರು ನಗರದಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಸಂತೆ ವ್ಯಾಪಾರವನ್ನೇ ನಿಲ್ಲಿಸಬೇಕಾಗಿ ಬಂದಿದೆ ಎಂದು ಎಪಿಎಂಸಿಯಲ್ಲಿ ಸಂತೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ಅಳವತ್ತುಕೊಂಡಿದ್ದಾರೆ.







