ದರೋಡೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ
ಬಡಗನ್ನೂರು ಗ್ರಾಮ ಪಂಚಾಯತ್ ಸಭೆಯಲ್ಲಿ ಸದಸ್ಯರ ಆಗ್ರಹ
ಪುತ್ತೂರು,ಅ.31 : ಬಡಗನ್ನೂರು ಗ್ರಾಮದ ಪಾದೆಕರ್ಯ ಎಂಬಲ್ಲಿ ಹಾಡುಗಹಲೇ ನಡೆದಿರುವ ಮನೆ ದರೋಡೆ ಪ್ರಕರಣವನ್ನು ಕೂಡಲೇ ಬೇಧಿಸಿ ಆರೋಪಿಗಳಳನ್ನು ಬಂಧಿಸಿ ಕಠಿಣಕ್ರಮಕೈಗೊಳ್ಳಬೇಕು ಎಂದು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಳಿನಿಂದ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಬಡಗನ್ನೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಕನ್ನಾಯ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಪಾದೆಕರ್ಯ ಎಂಬಲ್ಲಿರುವ ವಿಷ್ಣು ಭಟ್ ಅವರ ಮನೆಗೆ ಕಳೆದ ಅ.25ರಂದು ಮಧ್ಯಾಹ್ನ ದರೋಡೆಕೋರರು ಬಂದು ಮನೆಯಲ್ಲಿದ್ದ ಇಬ್ಬರು ಮಹಿಳೆಯ ಕೈಕಾಲು ಕಟ್ಟಿಹಾಕಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ ಎಂದ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ಕಠಿಣಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು,
ಪಾದೆಕರ್ಯ ಮನೆ ದರೋಡೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸುತ್ತಾರೆ ಎಂದು ಅಧ್ಯಕ್ಷ ಕೇಶವ ಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು. ಹಣ ,ಸಂಪತ್ತು ಇರುವವರು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸುವುದೇ ಸೂಕ್ತ ಎಂದು ಸದಸ್ಯರು ಸಲಹೆ ನೀಡಿದರು.
ನಿರ್ಣಯಗಳಿಗೆ ಬೆಲೆಯಿಲ್ಲ:
ಗ್ರಾಮ ಪಂಚಾಯತ್‌ನಲ್ಲಿ ನಿರ್ಣಯ ಅಂಗೀಕರಿಸಿ ಸಂಬಂಧಪಟ್ಟವರಿಗೆ ಕಳುಹಿಸಿ ಕೊಟ್ಟರೂ ಯಾವುದೇ ನಿರ್ಣಯಗಳಿಗೆ ಸಂಬಂಧಪಟ್ಟ ಇಲಾಖೆಗಳಿಂದ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ನಮ್ಮ ನಿರ್ಣಯಗಳಿಗೆ ಬೆಲೆಯಿಲ್ಲದಾಗಿದೆ ಎಂದ ಸದಸ್ಯ ರವಿರಾಜ್ ರೈ ಸಜಂಕಾಡಿ ಅವರು ಇದೇ ಪರಿಸ್ಥಿತಿ ಮುಂದುವರಿದಲ್ಲಿ ಪಂಚಾಯಿತಿ ಸಮಾನ್ಯ ಸಭೆಗೆ ಸದಸ್ಯರು ಬರುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉಳಿದ ಬಹುತೇಕ ಸದಸ್ಯರು ಧ್ವನಿಗೂಡಿಸಿದರು.ಅಲ್ಲದೆ ಕೆಲವು ಸದಸ್ಯರು ಮುಂದಿನ ಸಭೆಗೆ ಹಾಜರಾಗುವುದಿಲ್ಲ ಎಂದು ತಮ್ಮ ಅತೃಷ್ತಿಯನ್ನು ಬಹಿರಂಗಪಡಿಸಿದರು. ಕೆಲವೊಂದು ಮಹತ್ವದ ನಿರ್ಣಯಗಳಿಗೂ ಬೆಲೆ ಇಲ್ಲದಾಗಿದೆ .ನಿರ್ಣಯಗಳು ಕೇವಲ ಸಭೆಯಲ್ಲಿನ ಚರ್ಚೆಗೆ ಮಾತ್ರ ಸೀಮಿತವಾಗುತ್ತಿದೆ ಎಂದು ಸದಸ್ಯೆ ಹೇಮಲತಾ ಅವರು ಹೇಳಿದರು. ಅಧ್ಯಕ್ಷ ಕೇಶವ ಗೌಡ ಅವರು ಮಾತನಾಡಿ ಪಂಚಾಯಿತಿಯಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ನಾವು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡುತ್ತಿದ್ದೇವೆ. ಅಲ್ಲಿ ಏನಾಗುತ್ತಿದೆ ಎಂಬುವುದು ನಮಗೆ ತಿಳಿಯುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರಕ್ಕೆ ಆಗ್ರಹ:
ಕೊಳವೆ ಬಾವಿ ಕೊರೆಯುವುದಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದಿಂದಾಗಿ ಇಲ್ಲಿನ ಕೃಷಿಕರಿಗೆ ತೊಂದರೆಯಾಗಲಿದ್ದು, ಈ ನಿಟ್ಟಿನಲ್ಲಿ ಆದೇಶದ ಬದಲಾವಣೆ ಮಾಡಬೇಕು. ಅಗತ್ಯಕ್ಕೆ ಅನುಸಾರವಾಗಿ ಕೊಳವೆ ಬಾವಿ ಕೊರೆಯಲು ಅವಕಾಶ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕೊಳವೆ ಬಾವಿ ಕೊರೆಯಲು ಕೃಷಿಕರಿಗೆ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಬರೆದುಕೊಳ್ಳೋಣ ಎಂದು ಅಧ್ಯಕ್ಷ ಕೇಶವ ಗೌಡ ಅವರು ಸಲಹೆ ನೀಡಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.







