ಪೊಲೀಸರ ವೇತನ ಹೆಚ್ಚಳ ಶೀಘ್ರ ತೀರ್ಮಾನ: ಜಿ. ಪರಮೇಶ್ವರ್

ಹಾಸನ,ಅ.31: ಪೊಲೀಸರ ವೇತನ ಹೆಚ್ಚಳ ವಿಚಾರವಾಗಿ ಸಮಿತಿಯೊಂದಿಗೆ ಚರ್ಚೆ ಮಾಡಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಮತ್ತೆ ಪ್ರತಿಭಟನೆಗೆ ಮುಂದಾಗುವುದಿಲ್ಲ ಎಂದು ಗೃಹ ಮಂತ್ರಿ ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಆದಿ ದೇವತೆ ಹಾಸನಾಂಬೆ ದೇವಾಲಯದ ಬಾಗಿಲು ಹಾಕುವ 12ನೇ ದಿನಕ್ಕೆ ದೇವಿ ದರ್ಶನ ಪಡೆಯಲು ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ಪ್ರಥಮ ಬಾರಿಗೆ ಔರಾದ್ಕರ್ ಸಮಿತಿ ನೀಡಿರುವ ವರದಿ ಬಗ್ಗೆ ಎರಡು ಬಾರಿ ಮುಖ್ಯಮಂತ್ರಿ ಬಳಿ ಚರ್ಚೆ ಮಾಡಲಾಗಿದೆ. ಮುಖ್ಯಮಂತ್ರಿಯವರೇ ಹಣಕಾಸು ನಿರ್ವಹಣೆ ಮಾಡುತ್ತಿರುವುದರಿಂದ ಪೊಲೀಸರ ವೇತನವನ್ನು ಪರಿಶೀಲನೆ ಮಾಡಿ, ಯಾವ ರೀತಿ ಮಾಡಬಹುದು ಎಂಬುದರ ಬಗ್ಗೆ ಆದಷ್ಟು ಶೀಘ್ರ ತೀರ್ಮಾನ ಕೈಗೊಳ್ಳುವ ಮೂಲಕ ಸಮಸ್ಯೆ ಬಗೆಹರಿಯಲಿದೆ ಎಂದರು. ನವೆಂಬರ್ 14ಕ್ಕೆ ಮತ್ತೆ ಪೊಲೀಸರು ಪ್ರತಿಭಟನೆಗೆ ಇಳಿಯುತ್ತಿರುವ ವಿಚಾರದ ಪ್ರಶ್ನೆ ಮಾಡಿದ ಸುದ್ದಿಗಾರರಿಗೆ ಉತ್ತರಿಸಿದ ಅವರು, ನನ್ನ ದೃಷ್ಠಿಯಲ್ಲಿ ಪ್ರತಿಭಟನೆ ಮಾಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ನನಗೂ ಪೊಲೀಸ್ ಇಲಾಖೆ ಬಗ್ಗೆ ಅನುಕಂಪವಿದೆ ಎಂದು ಹೇಳಿದರು.
ಪ್ರಥಮ ಬಾರಿಗೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿ ದರ್ಶನ ಮಾಡಿದ್ದೇನೆ. ಇನ್ನು ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಮಳೆ ಇಲ್ಲದೆ ರೈತ ಬೆಳೆದ ಬೆಳೆ ನಷ್ಟಹೊಂದಿದೆ. ಹಾಸನಾಂಬೆ ದೇವಿ ಕರುಣಿಸಿ, ಸಕಾಲಕ್ಕೆ ಮಳೆ ಬೆಳೆ ಬಂದು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಬೇಡಿರುವುದಾಗಿ ತಿಳಿಸಿದರು.
ಇದೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ನಾರಾಯಣಗೌಡ, ಮುಖಂಡರಾದ ಹೆಚ್.ಪಿ. ಮೋಹನ್, ಹೆಚ್.ಕೆ. ಮಹೇಶ್, ಜಿಲ್ಲಾಧಿಕಾರಿ ವಿ. ಚೈತ್ರಾ, ಉಪವಿಭಾಗಧೀಕಾರಿ ನಾಗರಾಜ್ ಇತರರು ಇದ್ದರು.







