ಸಿವಿಸಿಗೆ ಒಂದು ಕೋ.ರೂ ಮತ್ತು ಹೆಚ್ಚಿನ ಬ್ಯಾಂಕ್ ವಂಚನೆಗಳ ವರದಿ ಸಲ್ಲಿಕೆ ಕಡ್ಡಾಯ

ಹೊಸದಿಲ್ಲಿ,ಅ.31: ವಿಜಯ ಮಲ್ಯ ಸಾಲ ಸುಸ್ತಿ ಪ್ರಕರಣದಂತಹ ಭಾರೀ ಮೊತ್ತದ ಬ್ಯಾಂಕ್ ವಂಚನೆಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಜಾಗ್ರತ ಆಯೋಗ(ಸಿವಿಸಿ)ವು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಒಂದು ಕೋ.ರೂ.ಮತ್ತು ಹೆಚ್ಚಿನ ಮೊತ್ತದ ಇಂತಹ ವಂಚನೆ ಪ್ರಕರಣಗಳನ್ನು ತನಗೆ ವರದಿ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಬ್ಯಾಂಕುಗಳಿಂದ ನಾಲ್ವರು ಮಹಾ ಪ್ರಬಂಧಕ ದರ್ಜೆಯ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿರುವ ಸಿವಿಸಿಯು ವರದಿಗಳನ್ನು ಪರಿಶೀಲಿಸಿದ ಬಳಿಕ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕೇ ಎನ್ನುವುದನ್ನು ಶಿಫಾರಸು ಮಾಡಲಿದೆ.
2015ನೇ ಸಾಲಿನಲ್ಲಿ ಸಿಬಿಐ ಒಟ್ಟೂ 20,646 ಕೋ.ರೂ.ಗಳನ್ನೊಳಗೊಂಡ 171 ಬ್ಯಾಂಕ್ ವಂಚನೆ ಪ್ರಕರಣಗಳ ತನಿಖೆ ನಡೆಸಿದೆ. ಅದು 1.20ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನೊಳಗೊಂಡ ಪೊಂಝಿ ಯೋಜನೆಗಳ ಬಗ್ಗೆಯೂ ತನಿಖೆ ಡೆಸುತ್ತಿದೆ.
50 ಕೋ.ರೂ.ಮತ್ತು ಹೆಚ್ಚಿನ ಮೊತ್ತದ ಶಂಕಿತ ವಂಚನೆ ಪ್ರಕರಣಗಳ ಮೇಲೆ ನಿಗಾಯಿರಿಸಲು ಆರ್‌ಬಿಐ,ಸಿಬಿಐ ಮತ್ತು ಬ್ಯಾಂಕುಗಳ ಹಿರಿಯ ಅಧಿಕಾರಿಗಳ ಮಾಸಿಕ ಸಭೆಗಳನ್ನೂ ಸಿವಿಸಿ ಕರೆಯಲಿದೆ.
ಒಂದು ಕೋ.ರೂ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಗಳ ಶಂಕಿತ ವಂಚನೆ ಪ್ರಕರಣಗಳಲ್ಲಿ ಈ ವರೆಗೆ ಬ್ಯಾಂಕುಗಳು ಆರ್‌ಬಿಐಗೆ ಮಾತ್ರ ವರದಿ ಸಲ್ಲಿಸುತ್ತಿದ್ದವು ಎಂದು ಜಾಗ್ರತ ಆಯುಕ್ತ ಟಿ.ಎಂ.ಭಾಸಿನ್ ತಿಳಿಸಿದರು.







