ಟಿಪ್ಪು ಜಯಂತಿ ಕುರಿತು ವಿವಾದ ಸರಿಯಲ್ಲ: ಖರ್ಗೆ

ಬೆಂಗಳೂರು, ಅ. 31: ಸರಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದನ್ನೇ ಗುರಿಯಾಗಿಸಿಕೊಂಡು ಬಿಜೆಪಿ, ಆರೆಸ್ಸೆಸ್ ವಿರೋಧ ವ್ಯಕ್ತಪಡಿಸಿ ವಿವಾದ ಹುಟ್ಟಿಹಾಕಿ, ಅಶಾಂತ ವಾತಾವರಣ ನಿರ್ಮಿಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಹೇಳಿದ್ದಾರೆ.
ಸೋಮವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 32ನೆ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದೇಶಕ್ಕಾಗಿ ಹೋರಾಡಿದ ನಾಯಕರನ್ನು ಹಿಂದು, ಮುಸ್ಲಿಮ್ ಎಂದು ವಿಂಗಡಿಸುವುದಲ್ಲದೆ, ಇಂತಹ ವಿಷಯಗಳನ್ನು ಕೋಮುವಾದಕ್ಕೆ ಮತ್ತು ರಾಜಕೀಯಕ್ಕೆ ಬಳಸಿಕೊಳ್ಳುವುದು ಸೂಕ್ತವಲ್ಲ ಎಂದ ಅವರು, ಕಳೆದ ಬಾರಿಯ ಟಿಪ್ಪುಜಯಂತಿಯ ಸಂದರ್ಭದಲ್ಲಿ ಆಗಿದ್ದ ಅನಾಹುತದಂತೆ ಈ ಬಾರಿಯೂ ಅನಾಹುತ ಸಂಭವಿಸಲಿದೆ ಎಂದು ಟಿಪ್ಪುಜಯಂತಿಯನ್ನು ವಿರೋಧಿಸುವುದು ಸರಿಯಲ್ಲ. ಕಾನೂನು ಸುವ್ಯವಸ್ಥೆಗೆ ಲೋಪವಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ ಎಂದು ನುಡಿದರು.
ಹಲವಾರು ಮಹನೀಯರ ಜಯಂತಿಯನ್ನು ಸರಕಾರ ಆಚರಿಸಿಕೊಂಡು ಬರುತ್ತಿದೆ. ಅದೇ ರೀತಿ, ಟಿಪ್ಪುಜಯಂತಿಯನ್ನು ಆಚರಿಸುತ್ತಿದೆ. ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಯಾವುದೇ ರೀತಿಯ ಗೊಂದಲ ಇಲ್ಲದೆ ಸರಕಾರ ಜಯಂತಿ ನಡೆಸಲಿದೆ ಎಂದು ಹೇಳಿದರು.







