ಭೋಪಾಲ್ 'ಎನ್‌ಕೌಂಟರ್' : ಅನುಮಾನ ಮೂಡಿಸಿದ ವಿಡಿಯೋ ದೃಶ್ಯಾವಳಿ
.jpg)
ಭೋಪಾಲ್, ಅ.31: ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಎಂಟು ಸಿಮಿ ಕಾರ್ಯಕರ್ತರು ಕೊಲ್ಲಲ್ಪಟ್ಟ ಘಟನೆಯ ಬಗ್ಗೆ ಸ್ಥಳೀಯರು ಚಿತ್ರೀಕರಿಸಿದ ವಿಡಿಯೋ ಚಿತ್ರಾವಳಿ ಸಾಮಾಜಿಕ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಪ್ರಕರಣದ ಬಗ್ಗೆ ಅನುಮಾನ ಮೂಡಿಸಿದೆ. ಈ ಎಂಟು ಮಂದಿ ಸಿಮಿ ಕಾರ್ಯಕರ್ತರು ಸೋಮವಾರ ಮುಂಜಾನೆ 2 ಗಂಟೆ ವೇಳೆ ಜೈಲಿನಲ್ಲಿದ್ದ ಚಮಚವನ್ನು ಚೂರಿಯ ರೀತಿ ಮಾರ್ಪಾಡು ಮಾಡಿ ಅದರಿಂದ ಕಾವಲುಗಾರನನ್ನು ಇರಿದು ಕೊಂದ ಬಳಿಕ, ಬಟ್ಟೆ ಮತ್ತು ಕಟ್ಟಿಗೆಯಿಂದ ರಚಿಸಿದ ಏಣಿ ಬಳಸಿ ಜೈಲಿನ ಆವರಣ ಗೋಡೆ ಜಿಗಿದು ಪರಾರಿಯಾಗಿದ್ದಾರೆ. ಬಳಿಕ ಅವರನ್ನು ಸಮೀಪದ ಆಚಾರ್‌ಪುರ ಗ್ರಾಮದಲ್ಲಿ ಎನ್‌ಕೌಂಟರ್ ನಡೆಸಿ ಕೊಂದು ಹಾಕಲಾಗಿದೆ ಎಂದು ಮಧ್ಯಪ್ರದೇಶದ ಗೃಹಸಚಿವ ಭೂಪೇಂದ್ರ ಸಿಂಗ್ ಮಾಧ್ಯಮದವರಿಗೆ ತಿಳಿಸಿದ್ದರು.
ಆದರೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಯೋಗೇಶ್ ಚೌಧರಿಯವರ ಪ್ರಕಾರ, ಪರಾರಿಯಾದ ಸಿಮಿ ಕಾರ್ಯಕರ್ತರ ಬಳಿ ಆಯುಧಗಳಿದ್ದವು. ಪೊಲೀಸರು ಅವರ ಬೆನ್ನತ್ತಿದಾಗ ಪೊಲೀಸರ ಮೇಲೆ ಗುಂಡು ಹಾರಿಸಿದರು. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಎಂಟೂ ಮಂದಿ ಬಲಿಯಾಗಿದ್ದಾರೆ ಎಂದು ತಿಳಿಸಿದ್ದರು. ಇದೀಗ ಸ್ಥಳೀಯರು ಚಿತ್ರೀಕರಿಸಿದ್ದು ಎಂದು ಹೇಳಲಾಗಿರುವ ವಿಡಿಯೋ ದೃಶ್ಯದಲ್ಲಿ ಪೊಲೀಸರು ಓರ್ವ ವ್ಯಕ್ತಿಯ ಮೇಲೆ ಅತೀ ಸಮೀಪ ನಿಂತು ಗುಂಡು ಹಾರಿಸಿ ಕೊಲ್ಲುವ ದೃಶ್ಯವಿದೆ. ಅಲ್ಲದೆ ಮೃತಪಟ್ಟ ಓರ್ವ ವ್ಯಕ್ತಿಯ ಬಳಿಯಿಂದ ಚೂರಿಯೊಂದನ್ನು ಪೊಲೀಸರು ಹೊರಗೆ ತೆಗೆಯುವ ದೃಶ್ಯವೂ ಇದೆ. ಈ ವೈರುಧ್ಯದ ಹೇಳಿಕೆ ಮತ್ತು ವಿಡಿಯೋ ದೃಶ್ಯಾವಳಿ ಇದೀಗ ಎನ್‌ಕೌಂಟರ್ ಘಟನೆಯ ಬಗ್ಗೆ ಶಂಕೆಗೆ ಕಾರಣವಾಗಿದೆ.
ನ್ಯಾಯಾಂಗ ತನಿಖೆಗೆ ಒತ್ತಾಯ: ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಿದರಷ್ಟೇ ಸಾಲದು. ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಎಐಎಂಐಎಂ ಮುಖಂಡ ಅಸಾಉದ್ದೀನ್ ಒವೈಸಿ ಹೇಳಿದ್ದಾರೆ. ಬಿಗು ಭದ್ರತೆಯ ಜೈಲಿನಿಂದ ಸಿಮಿ ಕಾರ್ಯಕರ್ತರು ತಪ್ಪಿಸಿಕೊಳ್ಳುತ್ತಾರೆ ಮತ್ತು ಕೆಲವೇ ಗಂಟೆಗಳಲ್ಲಿ ಅವರನ್ನು ಪತ್ತೆ ಮಾಡಿ ಕೊಲ್ಲಲಾಗುತ್ತದೆ. ಇದೀಗ ಯಾರನ್ನೂ ಪ್ರಶ್ನಿಸುವಂತಿಲ್ಲ, ಯಾವುದೇ ಸಾಕ್ಷಿಗಳಿಲ್ಲ . ಸತ್ತವರ ಹೇಳಿಕೆಗಳನ್ನೂ ದಾಖಲಿಸಿಕೊಂಡಿಲ್ಲ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಯಾಕೆಂದರೆ ಏನು ನಡೀತಾ ಇದೆ ಎಂದು ಸರಕಾರಕ್ಕೂ ತಿಳಿಯಬೇಕಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಮಲನಾಥ್ ಹೇಳಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಕೂಡಾ ಘಟನೆಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.





