ಜೈಲಿನಿಂದ ಸಿಮಿ ಕಾರ್ಯಕರ್ತರ ಪರಾರಿ ಕುರಿತು ಎನ್‌ಐಎ ತನಿಖೆ: ಮುಖ್ಯಮಂತ್ರಿ ಚೌಹಾಣ್

ಭೋಪಾಲ,ಅ.31: ಸೋಮವಾರ ಬೆಳಗಿನ ಜಾವ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಎಂಟು ಶಂಕಿತ ಸಿಮಿ ಕಾರ್ಯಕರ್ತರು ಇಲ್ಲಿಯ ಭಾರೀ ಬಿಗುಭದ್ರತೆಯ ಜೈಲಿನಿಂದ ಪರಾರಿಯಾದ ಘಟನೆಯ ಕುರಿತಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಯು ತನಿಖೆ ನಡೆಸಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ತಿಳಿಸಿದರು.
ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ಬಗ್ಗೆ ತಾನು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಮಾಹಿತಿ ನೀಡಿರುವುದಾಗಿ ಮತ್ತು ಎನ್‌ಐಎ ತನಿಖೆಗಾಗಿ ಕೇಂದ್ರ ಸರಕಾರವನ್ನು ಕೋರಿಕೊಂಡಿರುವುದಾಗಿ ಅವರು ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌಹಾಣ್,ಈ ಘಟನೆ ಕೇವಲ ಮಧ್ಯಪ್ರದೇಶಕ್ಕೆ ಸಂಬಂಧಿಸಿದ್ದಲ್ಲ, ಹೀಗಾಗಿ ಘಟನೆಯ ಹಿಂದೆ ಇನ್ನೇನಾದರೂ ಸಂಚು ಅಡಗಿತ್ತೇ ಎನ್ನುವುದನ್ನು ಎನ್‌ಐಎ ಪರಿಶೀಲಿಸಲಿದೆ ಎಂದರು.
ಪರಾರಿಯಾಗಿದ್ದ ಸಿಮಿ ಕಾರ್ಯಕರ್ತರನ್ನು ಪತ್ತೆ ಹಚ್ಚಿದ್ದಕ್ಕಾಗಿ ಪೊಲೀಸರನ್ನು ಮತ್ತು ಅವರ ಬಗ್ಗೆ ಮಾಹಿತಿಗಳನ್ನು ನೀಡಿದ್ದಕ್ಕಾಗಿ ಎನ್‌ಕೌಂಟರ್ ನಡೆದ ಅಚ್ರಾಪುರ ಗ್ರಾಮಸ್ಥರನ್ನು ಅವರು ಅಭಿನಂದಿಸಿದರು.
ಸಿಮಿ ಕಾರ್ಯಕರ್ತರು ಜೈಲಿನಿಂದ ಪರಾರಿಯಾಗಿದ್ದು ಕ್ರಿಮಿನಲ್ ನಿರ್ಲಕ್ಷದ ಘಟನೆಯಾಗಿದೆ ಎಂದ ಅವರು, ಜೈಲಿನ ಡಿಜಿಪಿ,ಅಧೀಕ್ಷಕ,ಉಪಾಧೀಕ್ಷಕ ಮತ್ತು ಸಹಾಯಕ ಅಧೀಕ್ಷಕರ ಅಮಾನತಿಗೆ ತಾನು ಆದೇಶಿಸಿರುವುದಾಗಿ ತಿಳಿಸಿದರು.
ಜೈಲಿನಲ್ಲಿಯ ಭದ್ರತಾಲೋಪಗಳ ಬಗ್ಗೆ ಮಾಜಿ ಪೊಲೀಸ್ ಮಹಾನಿರ್ದೇಶಕ ನಂದನ್ ದುಬೆ ಅವರು ತನಿಖೆಯನ್ನು ನಡೆಸಲಿದ್ದಾರೆ ಎಂದರು.
ಅಗತ್ಯವಾದರೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲೂಬಹುದು ಎಂದು ಅವರು ಹೇಳಿದರು.







