ಮಹಾರಾಷ್ಟ್ರ ಅತ್ಯಂತ ರೈತ ಸ್ನೇಹಿ ರಾಜ್ಯ:ನೀತಿ ಆಯೋಗ

ಹೊಸದಿಲ್ಲಿ,ಅ.31: ನೀತಿ ಆಯೋಗವು ಕೃಷಿಕ್ಷೇತ್ರದಲ್ಲಿ ಸುಧಾರಣೆಗಳ ಕುರಿತ ತನ್ನ ಸೂಚಿಯನ್ನು ಪ್ರಕಟಿಸಿದ್ದು, ಮಹಾರಾಷ್ಟ್ರವು ದೇಶದಲ್ಲಿ ಅತ್ಯಂತ ರೈತ ಸ್ನೇಹಿ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್ ಮತ್ತು ರಾಜಸ್ಥಾನ ನಂತರದ ಸ್ಥಾನಗಳಲ್ಲಿವೆ.
ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ರಾಜ್ಯಗಳು ಕೈಗೊಂಡಿರುವ ಉಪಕ್ರಮಗಳನ್ನು ಆಧರಿಸಿ ನೀತಿ ಆಯೋಗವು ಇದೇ ಮೊದಲ ಬಾರಿಗೆ ‘ಕೃಷಿ ಮಾರುಕಟ್ಟೆ ಮತ್ತು ರೈತ ಸ್ನೇಹಿ ಸುಧಾರಣೆ ಸೂಚಿ ’ಯನ್ನು ಸಿದ್ಧಗೊಳಿಸಿದೆ.
29 ರಾಜ್ಯಗಳ ಪೈಕಿ ಪ.ಬಂಗಾಲ,ಉತ್ತರ ಪ್ರದೇಶ,ಪಂಜಾಬ್, ಅಸ್ಸಾಂ, ಜಾರ್ಖಂಡ್, ತಮಿಳುನಾಡು ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ 20 ರಾಜ್ಯಗಳು ಕೃಷಿಕ್ಷೇತ್ರದಲ್ಲಿ ಸುಧಾರಣೆಗಳಿಗೆ ಸಂಬಂಧಿಸಿದಂತೆ ಕಳಪೆ ಸಾಧನೆಯನ್ನು ಪ್ರದರ್ಶಿಸಿವೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಸೂಚಿಯು ಸಿದ್ಧಪಡಿಸಿರುವ ಪಟ್ಟಿಯಂತೆ ಮಧ್ಯಪ್ರದೇಶವು ನಾಲ್ಕನೆಯ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ಹರ್ಯಾಣ,ಹಿಮಾಚಲ ಪ್ರದೇಶ,ಆಂಧ್ರ ಪ್ರದೇಶ,ಕರ್ನಾಟಕ,ತೆಲಂಗಾಣ,ಗೋವಾ ಮತ್ತು ಛತ್ತೀಸ್‌ಗಡ ರಾಜ್ಯಗಳಿವೆ.
ಕೃಷಿ ಕ್ಷೇತ್ರದಲ್ಲಿಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಬಗೆಹರಿಸುವಲ್ಲಿ ರಾಜ್ಯಗಳಿಗೆ ನೆರವಾಗುವುದು ಈ ಸೂಚಿಯ ಉದ್ದೇಶವಾಗಿದೆ.





