ಮೂಡುಬಿದಿರೆಯಲ್ಲಿ ಗೋ ಪೂಜೆ, ಬಡವರ ಮನೆಗೆ ಕಾಮಧೇನು ಕಾರ್ಯಕ್ರಮ
.jpg)
ಮೂಡುಬಿದಿರೆ,ಅ.31: ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಸಾರ್ವಜನಿಕ ಗೋ ಪೂಜೆ ಹಾಗೂ ಬಡವರ ಮನೆಗೆ ಕಾಮಧೇನು ಕಾರ್ಯಕ್ರಮ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಸಂಜೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಂಗ್ರೆಸ್ ಬಡವರಿಗೆ ಗೋದಾನ ಮಾಡುವುದರ ಮೂಲಕ ಬಡವರ ಆಶಾಕಿರಣವಾಗಿ ಮೂಡಿದೆ. ಸಾಮಾಜಿಕ ನ್ಯಾಯದಿಂದ ಹಿಡಿದು ಜನಪರ ಕೆಲಸವನ್ನು ಮಾಡಿರುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಕಾಂಗ್ರೆಸ್ ಪಕ್ಷ ಭೂಮಿ ನೀಡಿ ಜನಪರ ಕಾಳಜಿಯನ್ನು ಮೆರೆದಿದೆ ಎಂದರು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರವೆನ್ನುವು ಶಾಶ್ವತವಲ್ಲ. ನಾವು ಯಾವತ್ತೂ ಅಧಿಕಾರದ ಹಿಂದೆ ಹೋಗಬಾರದು ಬದಲಾಗಿ ಜನರ ಹಿಂದೆ ಹೋದಾಗ ಮಾತ್ರ ಆತ ಜನನಾಯಕನಾಗಲು ಸಾಧ್ಯ ಮತ್ತು ನೈಜ್ಯ ಸಮಾಜ ಸೇವೆಗೆ ಆಧ್ಯತೆ ನೀಡಲು ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರು ಹಾಗೂ ಹೈನುಗಾರರ ಬದುಕು ಬೆಳಗಿಸಲು ಹಲವಾರು ಯೋಜನೆಗಳನ್ನು ಹೊರ ತಂದಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಪಶು ಭಾಗ್ಯ ಯೋಜನೆಯು ಕಾರ್ಯಗತವಾಗಲಿದೆ ಈ ನಿಟ್ಟಿನಲ್ಲಿ ಮಿಥುನ್ ರೈ ಅವರು ಬಡವರ ಮನೆಗೆ ಕಾಮಧೇನು ನೀಡುವ ಮೂಲಕ ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು. ಕಾರ್ಯಕ್ರಮದ ರೂವಾರಿ ಮಿಥುನ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವ ಧರ್ಮದವರನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷವು ಗೋವನ್ನು ಸದಾ ಪೂಜ್ಯನೀಯವಾಗಿ ಕಾಣುತ್ತಿದೆ. ಗೋ ದಾನ ಮಾಡುವ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಶಕ್ತಿ ನೀಡುವ ಉದ್ದೇಶ ಹೊಂದಿದ್ದೇವೆ. ಕಾಂಗ್ರೆಸ್ ಎಲ್ಲ ಧರ್ಮದ ಮೆಲೆ ಅಭಿಮಾನವನ್ನು ಹೊಂದಿರುವ ಪಕ್ಷ. ಅದರೆ ಕೆಲವು ಮತೀಯವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಆಚರಣೆ ಹೇಗೆ ಮಾಡಬೇಕೆಂಬುದನ್ನು ಟೀಕಕಾರರು ನಮಗೆ ಕಲಿಸಿಕೊಡಬೇಕೆಂದಿಲ್ಲ. ಯಾರಾದರು ಒಳ್ಳೆ ಕೆಲಸವನ್ನು ಮಾಡಬೇಕು ಬೆಂಬಲಿಸಬೇಕು, ಇಲ್ಲವೇ ಅದಕ್ಕಿಂತ ಹೆಚ್ಚಿನ ಸಮಾಜಮುಖಿ ಕೆಲಸ ಮಾಡಬೇಕು. ಮೂಡುಬಿದಿರೆ ಪ್ರಜ್ಞಾವಂತ ನಾಗರಿಕರು ಗೋದಾನ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಆಶೀರ್ವದಿಸಿದ್ದಾರೆ. ಕೇಸರಿ ಶಾಲನ್ನು ಯಾರಿಗೂ ಅಡವು ನೀಡಿಲ್ಲ. ನಾವು ನೈಜ್ಯ ಹಿಂದುಗಳು, ನಮ್ಮ ಧರ್ಮದ ಬಗ್ಗೆ ಅರಿವಿದೆ. ಅದನ್ನು ಬಳಸುವ ಹಕ್ಕಿದೆ ಎಂದರು.
ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ್ ಅಮೀನ್‌ಮಟ್ಟು, ಬಜ್ಪೆ ವಲಯ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೃಥ್ವಿರಾಜ್, ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಸನಿಲ್, ಜಿ.ಪಂ ಸದಸ್ಯ ದರಣೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿದ್ದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸ್ವಾಗತಿಸಿದರು. ಕೆ.ಕೆ ಪೇಜಾವರ, ರತ್ನಾಕರ ಸಿ. ಮೊಯ್ಲಿ ಕಾರ್ಯಕ್ರಮ ನಿರೂಪಿಸಿದರು.
75 ಕುಟುಂಬಗಳಿಗೆ ಗೋದಾನ:
ಅಲಂಗಾರು ಬಡಗು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ವೇ.ಮೂ ಈಶ್ವರ ಭಟ್ ನೇತೃತ್ವದಲ್ಲಿ ಗೋಪೂಜೆ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ 75 ಕುಟುಂಬಗಳಿಗೆ ಹಸು-ಕರುವನ್ನು ದಾನ ಮಾಡಲಾಯಿತು.







